(ವರದಿ: ಶ್ವೇತಾ ಕೊಣ್ಣೂರು)
ಗದಗ್: ಅನನ್ಯ ಆಯುರ್ವೇದ ಔಷಧಿಗಳ ಸಸ್ಯತಾಣ ಗದಗ ಜಿಲ್ಲೆಯ ಕಪ್ಪತ್ತಗುಡ್ಡ, ಉತ್ತರ ಕರ್ನಾಟಕದಲ್ಲಿ ದಕ್ಷಿಣ ಕರ್ನಾಟಕದ ಹಸಿರು ಸಿರಿಯಷ್ಟೇ ಖ್ಯಾತಿ ಹೊಂದಿದೆ. ಗದಗ ಜಿಲ್ಲೆ ಬಿಂಕದಕಟ್ಟಿಯಿಂದ ಪ್ರಾರಂಭವಾಗೋ ಸಾಲುಗಿರಿಗಳ ಧಾಮ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದವರೆಗೂ ಹಬ್ಬಿದೆ. ಹಿಂದೆ ಇದೇ ವನ್ಯಸಿರಿ ಕಪ್ಪತ್ತಗುಡ್ಡ ವನ್ಯಜೀವಿಧಾಮ ಆಗಬೇಕು ಅಂತಾ ನಾಡಿನ ಮಠಾಧಿಶರು ಹಾಗೂ ಪರಿಸರ ಹೋರಾಟಗಾರರು ಸಾಕಷ್ಟು ಹೋರಾಟ ಮಾಡಿದ ಫಲವಾಗಿ ಸರಕಾರ ಕಪ್ಪತ್ತಗುಡ್ಡವನ್ನ ಸಂರಕ್ಷಿತ ಅರಣ್ಯ ಪ್ರದೇಶ ಅಂತನೂ ಘೋಷಣೆ ಮಾಡಿದೆ. ಆದರೆ ಈವರೆಗೂ ಕಪ್ಪತ್ತಗುಡ್ಡಕ್ಕೆ ಬೆಂಕಿಯ ಕಾಟ ತಪ್ಪಿಲ್ಲ. ಇದೀಗ ಮತ್ತೆ ಸಹ ಮಟ ಮಟ ಮಧ್ಯಾಹ್ನವೇ ಮುಂಡರಗಿ ತಾಲೂಕಿನ ಡೋಣಿ ತಾಂಡೆ ಬಳಿ ಕಾಣಿಸಿಕೊಂಡ ಬೆಂಕಿ ಇಡೀ ರಾತ್ರಿಯೆಲ್ಲಾ ಹೊತ್ತಿ ಉರಿದು ರಾತ್ರಿ ಬೆಳಗಾಗುವಷ್ಟರಲ್ಲಿ ಬೆಳಗಿನಜಾವ ತಣ್ಣಗಾಗಿದೆ.
ಇದು ಯಾರೋ ಕಿಡಿಗೇಡಿಗಳೇ ಮಾಡಿದ ಕೃತ್ಯವಾಗಿದೆ ಎಂಬ ಅನುಮಾನ ಕಾಡಿದೆ. ಒತ್ತುವರಿ ಮಾಡಿಕೊಂಡಿದ್ದವರನ್ನ ಬಿಡಿಸಿ ಹಿಂದೆ ಸರಿಸಿದ್ದಕ್ಕೆ ದ್ವೇಶದ ಭಾವನೆಯಿಂದ ಈ ರೀತಿ ಮಾಡಿರಬಹುದೇನೋ ಎಂದು ಅರಣ್ಯಾಧಿಕಾರಿಗಳೂ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕೃತ್ಯ ಎಸಗಿದವರ ಮಾಹಿತಿ ನೀಡಿದರೆ ಅವರಿಗೆ ಸೂಕ್ತ ನಗದು ಬಹುಮಾನ ನೀಡುವ ಜೊತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
ಕಪ್ಪತ್ತಗುಡ್ಡಕ್ಕೆ ಬೆಂಕಿ ಬೀಳಬಾರದು ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮುಂಜಾಗೃತ ಕ್ರಮವಾಗಿ ಫೈರ್ ಲೈನ್ ಕಾಮಗಾರಿ ಮಾಡಿಕೊಳ್ಳುತ್ತಿತ್ತು. ಆದರೆ ಕೊರೊನಾ ಹಿನ್ನೆಲೆ ಇಲಾಖೆಯಲ್ಲಿನ ಸಿಬ್ಬಂದಿ ಕಡಿತಗೊಳಿಸಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಫೈರ್ ಲೈನ್ ಮಾಡಲಾಗಿಲ್ಲ. ಹೀಗಾಗಿ ಈ ಬಾರಿ ಬೆಂಕಿಯ ಕೆನ್ನಾಲೆಯನ್ನ ತಪ್ಪಿಸೋದು ಅರಣ್ಯ ಇಲಾಖೆಗೆ ಸವಾಲಾಯಿತು. ಕಪ್ಪತ್ತಗುಡ್ಡ ಉಳಿಸಬೇಕೆಂದರೆ ಸ್ಥಳಿಯರೂ ಸಹ ಇಲ್ಲಿ ಕೈ ಜೋಡಿಸಬೇಕು.
ಕಪ್ಪತ್ತಗುಡ್ಡಕ್ಕೆ ನಿರಂತರವಾಗಿ ಕಂಠಕ ಬೆನ್ನುಹತ್ತಿದೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಬೆಂಕಿಯ ಕೆನ್ನಾಲೆಗೆ ಸಿಕ್ಕು ನಲುಗೋ ಹಸಿರುಧಾಮಕ್ಕೆ ರಕ್ಷಾಕವಚ ಇಲ್ಲದಂತಾಗಿದೆ. ಅರಣ್ಯ ಇಲಾಖೆ ಸಹ ಸಿಬ್ಬಂದಿ ಕೊರತೆ ಅಂತ ಬೊಟ್ಟು ತೋರಿಸುತ್ತದೆ. ಇದು ನಿಜಕ್ಕೂ ವ್ಯಥೆಯ ಕಥೆ.