(ವರದಿ: ನವೀನ್ ಎಸ್.ಕೆ.)
ರಾಜ್ಯ ಬಿಜೆಪಿಯಲ್ಲೀಗ ಯತ್ನಾಳ್ ಅವರೇ ಪ್ರಭಾವಿ. ಹೀಗೆಂದು ವಿಶ್ಲೇಷಣೆ ಮಾಡುತ್ತಿರುವವರು ಬೇರಾರೂ ಅಲ್ಲ, ಬಿಜೆಪಿ ಹೈಕಮಾಂಡ್.
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ರಾಜ್ಯ ರಾಜಕೀಯದಲ್ಲಿ ಆಗಾಗ್ಗೆ ಸಂಚಲನ ಮೂಡಿಸುತ್ತಲೇ ಇರುವ, ಬಿಜೆಪಿಯೊಳಗಿನ ‘ಬೆಂಕಿ ಚೆಂಡು’ ಬಸನಗೌಡ ಪಟೀಲ್ ಯತ್ನಾಳ್, ಹಲವಾರು ಬಾರಿ ತನ್ನ ಲೂಸ್ ಟಾಕ್‌ನಿಂದಾಗಿ ಕಮಲ ಪಾಳಯದಲ್ಲಿ ತಳಮಲ ಸೃಷ್ಟಿಸಿದ್ದೂ ಇದೆ.
ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಯತ್ನಾಳ್ ಅವರು ಹೈಕಮಾಂಡ್‌ನ ಫೆವರೇಟ್ ಲೀಡರ್. ಕೆಲ ದಿನಗಳ ಹಿಂದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬಿಎಸ್‌ವೈ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದ ಯತ್ನಾಳ್, CD ಬಾಂಬ್ ಸಿಡಿಸಿ ಬಿಜೆಪಿಯಲ್ಲಿನ ಬಂಡಾಯದ ಅಧ್ಯಾಯವನ್ನು ಕ್ಲೈಮ್ಯಾಕ್ಸ್ ಘಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನಕ್ಕಿಳಿದಿದ್ದರು. ಆದರೆ ರಾಜ್ಯ ಉಸ್ತುವಾರಿ ನಾಯಕ ಅರುಣ್ ಸಿಂಗ್ ಅವರ ಮಧ್ಯಪ್ರವೇಶವು ಆ ಅಸಮಧಾನದ ಹೊಗೆಯನ್ನು ತಕ್ಕಮಟ್ಟಿಗೆ ತಣ್ಣಗಾಗುವಂತೆ ಮಾಡಿತು. ಆದರೆ ಅದಾಗಲೇ ಶಿಸ್ತು ಕ್ರಮದ ನೊಟೀಸ್ ನೀಡಬೇಕೆಂಬ ಬಿಎಸ್‌ವೈ ಬಂಟರ ಒತ್ತಡವೂ ಹೆಚ್ಚಾಗಿತ್ತು. ಹಾಗಾಗಿ ಒಲ್ಲದ ಮನಸ್ಸಿನಲ್ಲಿ ಯತ್ನಾಳ್‌ಗೆ ಹೈಕಮಾಂಡ್ ನೊಟೀಸ್ ನೀಡಿದೆಯಾದರೂ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಿಲ್ಲ.
ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ?
ಈ ನಡುವೆ ಯಡಿಯೂರಪ್ಪ ಅವರೇ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂದೇ ಗುರುತಾಗಿದ್ದರು. ಈ ಹೆಗ್ಗುರುತು ಈಗ ಬದಲಾಗಿದೆ ಎಂಬುದನ್ನು ಸಾಬೀತು ಮಾಡಲು ಮುಂದಾದ ಯತ್ನಾಳ್ ಈ ಪ್ರಯತ್ನದಲ್ಲಿ ಸಫಲರಾಗಿದ್ದಾರೆ ಎಂಬ ವರದಿಯೊಂದು ಬಿಜೆಪಿ ಹೈಕಮಾಂಡ್ ಕೈ ಸೇರಿದೆ. ಈ ವರದಿಯೇ ಈಗ ಕುತೂಹಲದ ಕೇಂದ್ರಬಿಂದು.
ಯಡಿಯೂರಪ್ಪ ಇಲ್ಲದಿದ್ದರೆ ರಾಜ್ಯ ಬಿಜೆಪಿಗೆ ಶಕ್ತಿ ಇಲ್ಲ ಎಂಬುದೇ ಕೇಸರಿ ಪಾಳಯದೊಳಗಿನ ಮಾತು. ಆದರೆ ಭಾನುವಾರ ನಡೆದ ‘ಪಂಚಮಸಾಲಿ ಶಕ್ತಿ ಪ್ರದರ್ಶನ’ವು ಲಿಂಗಾಯತ ಸಮುದಾಯದಲ್ಲಿ ನಾಯಕರಿಗೆ ಕೊರತೆಯಿಲ್ಲ ಎಂಬುದನ್ನು ಸಾಬೀತು ಮಾಡಿದೆ.
ಇದರ ಮುಂದಾಳುತ್ವ ವಹಿಸಿದವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಒಂದು ಸಮುದಾಯದ ಜನರನ್ನು ಲಕ್ಷಾಂತರ ಸಂಖ್ಯೆಯಲ್ಲಿ ಸೇರಿಸಿ, ಜನಶಕ್ತಿಯ ಅನಾವರಣ ಮಾಡಲಾಗಿದೆ. ದೆಹಲಿಯಲ್ಲಿದ್ದುಕೊಂಡೇ ಈ ಶಕ್ತಿ ಪ್ರದರ್ಶನದ ಸನ್ನಿವೇಶವನ್ನು ಪರಾಮರ್ಶಿಸಿರುವ ಬಿಜೆಪಿ ವರಿಷ್ಠರು, ಈ ಬೆಳವಣಿಗೆಯ ಹಿಂದಿನ ರೂವಾರಿ ಯತ್ನಾಳ್ ಎಂಬ ಕಾರಣಕ್ಕಾಗಿ ಅವರಿಗೆ ದೆಹಲಿಗೆ ಬುಲಾವ್ ನೀಡಿ ಕುತೂಹಲಕಾರಿ ಬೆಳವಣಿಗೆಗೆ ಮುನ್ನುಡಿ ಬರೆದಿದೆ.
ಕಮಲದೊಳಗೊಂದು ಅಚ್ಛರಿ?
ಈ ನಡುವೆ, ಬಿಎಸ್‌ವೈ ಅವರ ಉತ್ತರಾಧಿಕಾರಿಯನ್ನಾಗಿ ಯತ್ನಾಳ್ ಅವರನ್ನು ಹೈಕಮಾಂಡ್ ಘೋಷಿಸಬಹುದೇ ಎಂಬ ಚರ್ಚೆಗಳೂ ಕಮಲ ಪಾಳಯದಲ್ಲಿ ನಡೆದಿದೆ. ಕಟ್ಟರ್ ಹಿಂದೂತ್ವವಾದಿಯಾಗಿರುವುದರಿಂದ ಆರೆಸ್ಸೆಸ್ ನಾಯಕರಿಗೂ ಯತ್ನಾಳ್ ಫೇವರೇಟ್ ಹೆಸರು. ಆದರೆ ಪ್ರಸ್ತುತ ಶಿಸ್ತು ಕ್ರಮದ ನೊಟೀಸ್ ವಿಚಾರದಿಂದಾಗಿ ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರ ಪರವಾಗಿ ಯಾವುದೇ ಕಾರಣಕ್ಕೂ ನಿಲ್ಲುವಂತಿಲ್ಲ. ಹಾಗಾಗಿ ಈ ನೊಟೀಸ್ ವಿಚಾರವನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅದೇನೇ ಬೆಳವಣಿಗೆಗಳು ನಡೆದರೂ ಯತ್ನಾಳ್ ಅವರನ್ನು ದಿಲ್ಲಿ ವರಿಷ್ಠರು ಬಿಟ್ಟುಕೊಡಲಾರರು ಎಂಬುದು ಬಿಜೆಪಿ ಹಿರಿಯರ ಚಾವಡಿಯಲ್ಲಿ ಪ್ರತಿಧ್ವನಿಸುತ್ತಿರುವ ಮಾತುಗಳು.
ಇದೀಗ ದಿಲ್ಲಿಗೆ ಕರೆಸಿಕೊಂಡಿರುವ ಬಿಜೆಪಿ ವರಿಷ್ಠರು ಮೊದಲು ನೊಟೀಸ್ ವಿಷಯವನ್ನು ಬಗೆಹರಿಸಲಿದ್ದಾರೆ. ಆರಂಭದಲ್ಲಿ ಇದು ಯತ್ನಾಳ್ ಪಾಲಿಗೆ ಕಹಿ ಘಟ್ಟವಾದರೂ ಮುಂದಿನ ದಿನಗಳಲ್ಲಿ ಅಚ್ಚರಿಯ ತೀರ್ಮಾನವೊಂದು ಪ್ರಕಟವಾಗುವ ಸಂಭವವವಿದೆ ಎಂಬ ಸುಳಿವು ನೀಡಿದ್ದಾರೆ ಪಕ್ಷದ ರಾಷ್ಟ್ರೀಯ ನಾಯಕರು.