ಬೆಂಗಳೂರು: ದೇಶದ್ರೋಹ ಮಾತುಗಳಿಂದ ದೇಶದಲ್ಲಿ ಕ್ಷೋಭೆ ಉಂಟು ಮಾಡುವ ಮೂಲಕ ಅಪರಾಧ ಎಸಗಿರುವ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥೆಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಅವರು, ಮಂಗಳೂರಿನ ಉಳ್ಳಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಫ್ಐ ಸಂಘಟನೆಯ ಅನಿಸ್ ಎಂಬವರು ಶಿಕ್ಷಾರ್ಹ ಮತ್ತು ದೇಶದ್ರೋಹದ ಹೇಳಿಕೆಗಳನ್ನು ನೀಡಿದ್ದಾರೆ. ಹಿಂದೂ ಧರ್ಮದವರ ಭಾವನೆಗಳನ್ನು ಕೆರಳಿಸುವ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ. ಇಂಥ ಕೃತ್ಯವನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಹೀಗಾಗಿ ಈ ಸಂಘಟನೆಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದರು.
ಆರೆಸ್ಸೆಸ್ ಒಂದು ದೇಶಭಕ್ತಿ ಸಂಘಟನೆ. ರಾಮಮಂದಿರ ನಿರ್ಮಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಬಗ್ಗೆ ಮಾತನಾಡುವ ನೈತಿಕತೆ ಪಿಎಫ್ಐಗೆ ಇಲ್ಲ ಎಂದು ಸಚಿವರು ಹೇಳಿದರು. ಭಾರತ ವಿರೋಧಿ ಶಕ್ತಿಗಳೊಂದಿಗೆ ಪಿಎಫ್ಐ ಸಂಘಟನೆ ಹಣಕ್ಕಾಗಿ ಕೈಜೋಡಿಸಿದೆ ಎಂದೂ ಸಚಿವರು ಆರೋಪಿಸಿದರು.

























































