ಮಂಗಳೂರು: ಕರಾವಳಿ ಪೊಲೀಸರು ಮತ್ತೆ ಯಶಸ್ವೀ ಕಾರ್ಯಾಚರಣೆ ನಡೆಸಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಕೆಲವು ದಿನಗಳ ಹಿಂದೆ ಮಂಗಳೂರು ಹೊರವಲಯದ ಸುರತ್ಕಲ್ ಸಮೀಪ ನಡೆದ ಪಿಂಕಿ ನವಾಸ್ ಮೇಲಿನ ದಾಳಿಯ ಹಿಂದಿನ ರಹಸ್ಯವನ್ನು ಬೇಧಿಸಿರುವ ಪೊಲೀಸರು ಈ ಪ್ರಕರಣದಲ್ಲಿ ಬರೋಬ್ಬರಿ 9 ಮಂದಿಯನ್ನು ಬಂಧಿಸಿ ಕಂಬಿಯ ಹಿಂದೆ ಅಟ್ಟಿದ್ದಾರೆ.
ಸಿಸಿಬಿ ಡಿಸಿಪಿ ವಿನಯ್ ಗಾವಂಕರ್ ನೇತೃತ್ವದಲ್ಲಿ ಸಮರ್ಥ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಕಾಟಿಪಳ್ಳದ ರೌಡಿಶೀಟರ್ ಪಿಂಕಿ ನವಾಝ್ ಪ್ರಕರಣದಲ್ಲಿ ಆರೋಪಿಗಳ ಹೆಜ್ಜೆಗುರುತು ಪತ್ತೆ ಮಾಡಿದರು. ಅಷ್ಟೇ ಅಲ್ಲ, ಈ ಚಾಲಾಕಿ ಪೊಲೀಸರು ಖದೀಮರಿಗಾಗಿ ಸುರತ್ಕಲ್ ಠಾಣೆಯ ಪೊಲೀಸರ ಜೊತೆ ವ್ಯೂಹ ರಚಿಸಿ, ಜಂಟಿ ಕಾರ್ಯಾಚರಣೆ ಕೈಗೊಂಡರು. ಕೆಲವೇ ದಿನಗಳ ಈ ಕಾರ್ಯಾಚರಣೆಯಲ್ಲಿ ಪುಂಡರ ಇಡೀ ಗುಂಪನ್ನೇ ಖೆಡ್ಡಕ್ಕೆ ಬೀಳಿಸುವಲ್ಲಿ ಈ ಖಾಕಿ ಟೀಂ ಯಶಸ್ವಿಯಾಗಿದೆ.
ಕಂಬಿಯ ಹಿಂದೆ ಬಂಧಿತರ ಪೆರೇಡ್
ಕಾಟಿಪಳ್ಳ ಕೃಷ್ಣಾಪುರ ನಿವಾಸಿಗಳಾದ ಪ್ರಕಾಶ್ ಭಂಡಾರಿ (29), ಶಾಕೀರ್ (29) ಶೈಲೇಶ್ ಪೂಜಾರಿ (19), ಹನೀಫ್ (20), ಸುವಿನ್ ಕಾಂಚನ್ (23), ಲಕ್ಷ್ಮೀಶ್ (26), ಅಹ್ಮದ್ ಸಾದಿಕ್ (23), ನಿಸಾರ್ ಹುಸೈನ್ (29), ರಂಜನ್ ಶೆಟ್ಟಿ (24) ಬಂಧಿತ ಆರೋಪಿಗಳಾಗಿದ್ದಾರೆ. ಆರಂಭದಲ್ಲಿ ಸೆರೆಸಿಕ್ಕಿದ ಆರೋಪಿಗಳು ತೆರೆದಿಟ್ಟ ಸುಳಿವನ್ನಾಧರಿಸಿ ಇಡೀ ತಂಡವನ್ನೇ ಪೊಲೀಸರು ಬಂಧಿಸಿ ಅವರನ್ನ ಕಂಬಿಯ ಹಿಂದೆ ಪೆರೇಡ್ ನಡೆಸಿದ್ದಾರೆ. ಈ ವೇಳೆ, ರೌಡಿಶೀಟರ್ ಆಗಿದ್ದ ಪಿಂಕಿ ನವಾಝ್ ಬಗ್ಗೆ ಎದುರಾಳಿಗಳಿದ್ದ ವೈರತ್ವದ ಹಿಂದಿನ ರಹಸ್ಯವನ್ನೇ ಬಯಲಿಗೆಳೆದಿದ್ದಾರೆ.
ಇದನ್ನೂ ಓದಿ. ನಟೋರಿಯಸ್ ರೌಡಿಗಳಲ್ಲಿ ನಡುಕ.. ಕಮೀಷನರ್ ಶಶಿಕುಮಾರ್ ಭರ್ಜರಿ ಬೇಟೆ
ಫೆಬ್ರವರಿ 10ರಂದು ನಡೆದ ಕೃತ್ಯ:
ಫೆಬ್ರವರಿ 10ರಂದುಸಂಜೆ ಕಾಟಿಪಳ್ಳದ ಟಿಕ್‌ಟಾಕ್ ಗಾರ್ಡನ್ ಬಳಿ ಪಿಂಕಿ ನವಾಝ್‌ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲ ಸಮಯದಿಂದ ಶಾಂತವಾಗಿದ್ದ ಮಂಗಳೂರಿನಲ್ಲಿ ಮತ್ತೆ ರೌಡಿ ಪಡೆ ಹೆಡೆ ಎತ್ತಿದೆ ಎಂಬ ಸುಳಿವು ಈ ಪ್ರಕರಣದಿಂದ ಬೆಳಕಿಗೆ ಬಂದಿದ್ದೇ ತಡ, ಅಪರಾಧ ನಿಗ್ರಹಕ್ಕೆ ಮತ್ತೆ ಟೊಂಕಕಟ್ಟಿ ನಿಂತ ಪೊಲೀಸರು 9 ಮಂದಿಯನ್ನು ಬಂಧಿಸಿ ಪಾತಕ ಲೋಕಕ್ಕೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.