ಮಂಗಳೂರು: ತುಳನಾಡು ಪರಶುರಾಮನಿಂದ ಸೃಷ್ಟಿಯಾದ ತಪೋಭೂಮಿ ಎಂಬ ನಂಬಿಕೆ ಇದೆ. ಸಾಲು ಸಾಲು ದುರ್ಗಾ ದೇವಿಗಳ ತಾಣ ಎಂಬ ಪ್ರತೀತಿಗೆ ಪಾತ್ರವಾಗಿರುವ ಕರಾವಳಿಯಲ್ಲಿ ತುಳು ಪರಂಪರೆಯ ದೈವಾರಾಧನೆಗೂ ಮಹತ್ವವಿದೆ. ಸೀಮೆಗೊಂದು ದೇವಸ್ಥಾನ, ಕುಟುಂಬಕ್ಕೊಂದು ದೈವಸ್ಥಾನ ಹೀಗೆ ಭೂತಾರಾಧನೆಯ ಮಜಲುಗಳು ಅನೇಕ ಇವೆ. ಅದರಲ್ಲೂ ‘ಗುತ್ತು’ ಪರಂಪರೆಯಲ್ಲಿನ ಆಚರಣೆಯ ಗತ್ತು ಗಮ್ಮತ್ತು ತುಳುಪರಂಪರೆಗಷ್ಟೇ ಸೀಮಿತ ಎನ್ನಬಹುದು. ಅಂತಹಾ ಗುತ್ತುಗಳ ವರ್ಷದ ಪರ್ಬೋ ತನ್ನದ ಅದ ಆಕರ್ಷಣೆಯಿಂದ ನಾಡಿನ ಗಮನ ಕೇಂದ್ರೀಕರಿಸುತ್ತದೆ.

ಈ ಸೊಗಸು ಸೊಬಗಿಗೆ ಸಾಕ್ಷಿಯಾಗುತ್ತದೆ ಮಂಗಳೂರು ಹೊರವಲಯದ ಗುರುಪುರದ ಗೋಳಿದಡಿ ಗುತ್ತು. ಪ್ರತೀ ವರ್ಷದಂತೆ ಈ ಬಾರಿಯೂ ಇಲ್ಲಿ ‘ಗುತ್ತುದ ವರ್ಸೋದ ಪರ್ಬೋ’ ನಡೆಯಲಿದೆ. ಜನವರಿ 19 ಮತ್ತು 20ರಂದು ನಡೆಯುವ ಅನನ್ಯ ವೈಭವದ ಈ ಕೈಂಕರ್ಯದ ಸಿದ್ದತೆಗೆ ಅಂತಿಮ ಸ್ಪರ್ಷ ಸಿಕ್ಕಿದೆ. ದೇವಾಲಯಗಳಲ್ಲಿ ನೆರವೇರುವ ವರ್ದಂತ್ಯುತ್ಸವದ ರೀತಿಯಲ್ಲೇ ಈ ದೈವಾರಾಧನೆಯ, ನ್ಯಾಯದೇಗುಲ ಸ್ವರೂಪದ ಗದ್ದುಗೆಯಲ್ಲಿ ವಾರ್ಷಿಕ ಜಾತ್ರೆ ನಡೆಯಲಿದೆ.

ಗುರುಪುರದ ಈ ಗುತ್ತಿನ ಗಡಿಕಾರರಾದ ಶ್ರೀ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರ ಸಾರಥ್ಯದಲ್ಲಿ ಎರಡು ದಿನಗಳ ಕಾಲ ಹೋಮ, ಹವನ ಸಹಿತ ಮೂರೂ ಹೊತ್ತು ಪೂಜಾ ಕೈಂಕರ್ಯಗಳು ನಡೆದರೆ, ಇನ್ನೊಂದೆಡೆ ನಿರಂತ ಜನಪದ ಸೊಬಗು, ಗ್ರಾಮೀಣ ಕ್ರೀಡೆಗಳ ಸೊಗಸು ಅಲ್ಲಿ ಕಂಡುಬರುತ್ತದೆ. ಜನಪದ ಮೇಳಗಳು, ರಂಗಕಲೆಗಳು, ಯಕ್ಷಗಾನ ಪ್ರದರ್ಶನಗಳು ಏರ್ಪಟ್ಟರೆ, ಕುಸ್ತಿ ಸಹಿತ ತುಳುನಾಡಿನ ವಿವಿಧ ಜನಪದ ಕ್ರೀಡೆಗಳೂ ನೆರವೇರುತ್ತದೆ.

ಈ ಬಾರಿ ಕೊರೋನಾ ಸಂಕಟ ಎದುರಾಗಿದ್ದರಿಂದಾಗಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಜೊತೆ, ಸಂಕೀರ್ತನೆ ಹಾಗೂ ಯಕ್ಷಗಾನ, ರಂಗಕಲೆಗಳ ಸಹಿತ ಅಗತ್ಯ ಕಾರ್ಯಕ್ರಮಗಳಿಗೆ ‘ವರ್ಸೋದ ಪರ್ಬ’ವನ್ನು ಸೀಮಿತಗೊಳಿಸಲಾಗಿದೆ ಎಂದು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ತಿಳಿಸಿದ್ದಾರೆ.

ಅನನ್ಯ ವಾಸ್ತುವಿನ ಗುತ್ತು ಮನೆ: ತುಳುನಾಡಿನಲ್ಲಿ ಗುತ್ತು ಮನೆಗಳಿಗೆ ಅದರದ್ದೇ ಅದ ಗತ್ತು ಇದೆ. ವಿಶಾಲವಾಗಿ ಚಾಚಿಕೊಂಡ ಭವ್ಯ ಬಂಗಲೆಯಂತಿರುವ ಗುತ್ತು ಮನೆಗಳು ಈಗ ಅಪರೂಪದಲ್ಲಿ ಅಪರೂಪ ಎಂಬಂತಿದೆ. ಗುರುಪುರ ಫಲ್ಗುಣಿ ನದಿ ತೀರದಲ್ಲಿರುವ ಈ ಗೋಳಿದಡಿ ಗುತ್ತು ಮನೆ ಕೂಡಾ ವಿಶೇಷ ಮರದ ಕೆತ್ತನೆಗಳಿಂದ ನಿರ್ಮಾಣಗೊಂಡಿದೆ. ದೇವರ ಗುಡಿ, ನ್ಯಾಯದ ಅಂಗಳ ಸಹಿತ ದೈವ ಸಾನಿಧ್ಯ ಹಾಗೂ ಅತಿಥಿ ವಾಸದ ನೆಲೆಯಾಗಿ ರೂಪುಗೊಂಡು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ವಾರ್ಷಿಕ ಜಾತ್ರಾ ಸನ್ನಿವೇಶದಲ್ಲಿ ಭಾಗಿಯಾಗಲು ಬರುವ ಜನರು ಈ ಮನೆಯ ಅಚ್ಚರಿ ಹಾಗೂ ಕೌತುಕದ ಸೆಳೆಯನ್ನು ಕಣ್ತುಂಬಿಬಿಕೊಳ್ಳುತ್ತಾರೆ.

























































