ಮಂಗಳೂರು: ವಸ್ತು ನಿಷ್ಠ ವಿಮರ್ಶೆಯಿಂದ ಕೂಡಿದ ಪತ್ರಿಕಾ ವರದಿಗಳು ಆಡಳಿತ ವ್ಯವಸ್ಥೆ ಇನ್ನಷ್ಟು ಸಮರ್ಪಕ ಕಾರ್ಯನಿ ರ್ವಹಿಸಲು ಸಹಾಯವಾಗುತ್ತವೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ಮಂಗಳೂರು ಪತ್ರಿಕಾಭವನದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ನಡೆದ 2019ನೇ ಸಾಲಿನ ಪ.ಗೋ.(ಪದ್ಯಾಣ ಗೋಪಾಲಕೃಷ್ಣ) ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾ ಡುತ್ತಿದ್ದರು.
ಇಲಾಖೆಯಲ್ಲಿ ವರ್ಷಕ್ಕೆ ಒಂದು ಬಾರಿ ಅಡಿಟ್ ನಡೆಯುವ ಮೂಲಕ ಪಾರದರ್ಶಕತೆ ಯನ್ನು ಹೆಚ್ಚು ಮಾಡುವಂತೆ ದೈನಂದಿನ ವಿಚಾರಗಳಲ್ಲಿ ನಡೆಯುವ ಸರಿ ತಪ್ಪುಗಳನ್ನು ಪ್ರತಿನಿತ್ಯದ ಪತ್ರಿಕೋದ್ಯಮದ ವರದಿಗಳು ಸರಕಾರದ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿದೆಯೇ, ಜನರ ಭಾವನೆ ಹೇಗಿದೆ, ಆಡಳಿತ ವರ್ಗ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿದುಕೊಳ್ಳಲು ವಿಮರ್ಶಾತ್ಮಕ ವರದಿಗಳು ಸಹಕಾರಿಯಾಗುತ್ತವೆ. ಜನರು ಮಾಧ್ಯಮಗಳ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗಲು ವಸ್ತುನಿಷ್ಠ ವರದಿಗಳ ಅಗತ್ಯವಿದೆ ಎಂದು ಡಾ.ರಾಜೇಂದ್ರ ಕೆ.ವಿ. ಹೇಳಿದರು.
ಮಯಖ್ಯ ಅತಿಥಿ, ದ.ಕ.ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಮಾಧ್ಯಮ ಮತ್ತು ಪೊಲೀಸ್ ಇಲಾಖೆಯ ನಡುವಿನ ಸಂಪರ್ಕ ಉತ್ತಮ ರೀತಿಯಲ್ಲಿದೆ. ಪೊಲೀಸರ ಬಗ್ಗೆ ಜನರಿಗೆ ಇರುವ ಭಯದ ವಾತಾವರಣ ಹೋಗಲಾಡಿಸಲು ಇಂತಹ ಸಂವಹನ ಅಗತ್ಯ. ಅಲ್ಲದೆ ಪಾರದರ್ಶಕ ಕಾರ್ಯನಿರ್ವಹಣೆಗೆ ಉತ್ತಮ ಸಂಪರ್ಕ ಅವಶ್ಯ. ಸಮಾಜ ಮತ್ತು ಪೊಲೀಸರ ನಡುವಿನ ಸಂಪರ್ಕಕೊಂಡಿಯಾಗಿಯೂ ಜಿಲ್ಲೆಯ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.
ಮಂಗಳೂರು ಡಿಸಿಪಿ ವಿನಯ್ ಗಾಂವ್ಕರ್ ಮಾತನಾಡಿ, ಪೊಲೀಸ್ ಮತ್ತು ಮಾಧ್ಯಮ ಜೊತೆಯಾಗಿ ಜನತೆಗೆ ಸಹಾಯವಾಗುವ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ಮೂಡಿಸಲು ಸಾಧ್ಯ. ಪತ್ರಕರ್ತರು ತಾವು ಮಾಡುವ ವರದಿಯ ಮೂಲಕ ಪೊಲೀಸರಿಗೂ ಸಮರ್ಪಕವಾಗಿ ಕೆಲಸ ಮಾಡಲು ಸಹಕಾರಿ ಯಾಗಿದೆ. ಪೊಲೀಸ್ ಇಲಾಖೆಯಿಂದ ಮಾಹಿತಿಯನ್ನು ಪಡೆದು ಅದನ್ನು ಜನರಿಗೆ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಈ ಸಾಲಿನ ಪ.ಗೋ. ಪ್ರಶಸ್ತಿ ವಿಜೇತರಾದ ವಿಜಯ ಕರ್ನಾಟಕ ಮಂಗಳೂರು ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಪಡು, ಕಾವೇರಿ ಟೈಮ್ಸ್‌ನ ಹಿರಿಯ ವರದಿಗಾರ ಬೊಳ್ಳಜಿರ ಬಿ. ಅಯ್ಯಪ್ಪ ಅವರು ಪ್ರಶಸ್ತಿ ಹಾಗೂ ತಮ್ಮ ಪತ್ರಿಕೋದ್ಯಮದ ಅನುಭವಗಳನ್ನು ಹಂಚಿಕೊಂಡರು.
ಹಿರಿಯ ಪತ್ರಕರ್ತ ಜಗನ್ನಾಥ್ ಶೆಟ್ಟಿ ಬಾಳ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಖಜಾಂಚಿ ಪುಷ್ಪರಾಜ್ ಬಿ.ಎನ್. ಪ.ಗೋ ಕುಟುಂಬದ ಸದಸ್ಯರಾದ ವಿಶ್ವೇಶ ಪದ್ಯಾಣ, ಶಕುಂತಲಾ, ಶಾಲಿನಿ ಮತ್ತು ಪ.ಗೋ ಪ್ರಶಸ್ತಿ ಆಯ್ಕೆ ಸಮಿತಿಯ ತೀರ್ಪು ಗಾರರಾದ ಜಯಶ್ರೀ, ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.