ಬೆಂಗಳೂರು: ರಾಜ್ಯದಲ್ಲಿ ರೂಪಾಂತರಿ ಕೊರೋನಾ ವೈರಾಣು ಆತಂಕ ಸೃಷ್ಟಿಸಿದೆ. ಬೆಂಗಳೂರಿನ ಬಹುಮಹಡಿ ಕಟ್ಟಡವೊಂದರಲ್ಲಿ ನೆಲೆಸಿದ್ದ ಇಬ್ಬರು ವ್ಯಕ್ತಿಗಳಲ್ಲಿ ಈ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಡೀ ಕಟ್ಟಡವನ್ನು ಸೀಲ್‌ಡೌನ್ ಮಾಡಲಾಗಿದೆ.
ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಬೊಮ್ಮನಹಳ್ಳಿ ಸಮೀಪದ ಆ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಸುಮಾರು ೨೨ ಕುಟುಂಬಗಳು ವಾಸವಿದೆ. ಅಲ್ಲಿದ್ದ ತಾಯಿ ಹಾಗೂ ಮಗಳಿಗೆ ಸೋಂಕು ದೃಢಪಟ್ಟಿದ್ದರಿಂದ, ಬಿಬಿಎಂಪಿ ಅಧಿಕಾರಿಗಳು ಕಟ್ಟಡದಲ್ಲಿ 22 ಕುಟುಂಬಗಳನ್ನು ಬೇರೆಡೆಗೆ ವರ್ಗಾಯಿಸಿ ಕ್ವಾರಂಟೈನ್‌ನಲ್ಲಿರಿಸಲು ಯತ್ನಿಸಿದರು. ಆದರೆ, ನಿವಾಸಿಗಳು ಹೊರಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಡೀ ಅಪಾರ್ಟ್‌ಮೆಂಟನ್ನು ಸೀಲ್‌ಡೌನ್ ಮಾಡಲಾಗಿದೆ.
ಒಂದೇ ಲಿಫ್ಟ್ ಮತ್ತು ಮೆಟ್ಟಿಲುಗಳನ್ನು ಬಳಸಿದ್ದರಿಂದ ಅವರೆಲ್ಲರೂ ದ್ವಿತೀಯ ಸಂಪರ್ಕ ವ್ಯಕ್ತಿಗಳಾಗಿದ್ದಾರೆ. ಹಾಗಾಗಿ ಅವರ ಮಾದರಿಗಳನ್ನು ಆರ್‌ಟಿಪಿಸಿಆರ್ ಪರೀಕ್ಷೆಗಳಿಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.