ದೆಹಲಿ: ಸರ್ಕಾರದ ಮನವಿಗೆ ಗೌರವ ನೀಡಿ ಸಭಾಪತಿಗಳು ಕಲಾಪ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸಂವಿಧಾನ ಬಾಹಿರವಾಗಿ ಸಭಾಪತಿಗಳಿಗೆ ನಿರ್ಬಂಧ ಹೇರಿದ್ದು ಯಾಕೆ? ಆ ಅಧಿಕಾರವನ್ನು ಅವರಿಗೆ ಕೊಟ್ಟಿದ್ದು ಯಾರು?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ರಾಜ್ಯ ವಿಧಾನಪರಿಷತ್ನಲ್ಲಿನ ಘಟನೆ ಕುರಿತಂತೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಮ್ಮ ಸದನಗಳಿಗೆ ಬಹಳ ಗೌರವ, ಘನತೆ ಇದೆ. ರಾಜ್ಯಪಾಲರು, ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು. ಅದರ ಆಧಾರದ ಮೇಲೆ ಕಾರ್ಯದರ್ಶಿಗಳು ಪತ್ರ ಬರೆದರು ಎಂದು ವಿಧಾನ ಪರಿಷತ್ತಿನ ಸಭಾಪತಿಗಳು ಇಂದು ಕಲಾಪ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸಭಾಪತಿಗಳು ಬಂದು, ಗಂಟೆ ನಿಲ್ಲುವುದಕ್ಕೂ ಮುನ್ನ ಉಪಸಭಾಪತಿಗಳು ಹಠಾತ್ತನೆ ಬಂದು ಬಾಗಿಲು ಮುಚ್ಚಿ ಪೀಠದ ಬಳಿ ಬಂದು ಸಭಾಪತಿಗಳ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದಾರೆ. ಇದು ಕರ್ನಾಟಕ ವಿಧಾನ ಮಂಡಲ ಹಾಗೂ ಅದರಲ್ಲೂ ವಿಶೇಷವಾಗಿ ವಿಧಾನ ಪರಿಷತ್ ಗೆ ಆದ ದೊಡ್ಡ ಅಪಮಾನ ಎಂದರು.
ಅವರ ಪತ್ರವನ್ನು ಸಭಾಪತಿಗಳು ತಿರಸ್ಕರಿಸಬಹುದಿತ್ತು. ಆದರೆ ಅವರ ಮಾತಿಗೆ ಗೌರವ ನೀಡಬೇಕು ಎಂದು ಕಲಾಪ ಆರಂಭಿಸಲು ಮುಂದಾದರು. ಅವರು ಕೂಡ ಕಲಾಪವನ್ನು ಸರಿಯಾಗಿ ನಡೆಯಲು ಅವಕಾಶ ಕೊಡಬೇಕಿತ್ತು ಎಂದು ಡಿಕೆಶಿ ಹೇಳಿದ್ದಾರೆ.
ಗೂಂಡಾಗಳು ಯಾರು? ಕಾನೂನು ಬಾಹಿರವಾಗಿ ಬಾಗಿಲು ಮುಚ್ಚಿದವರು ಯಾರು? ಸಭಾಪತಿಗಳು ಇದ್ದಾಗ ಅವರ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದು ಯಾಕೆ? ಅವರಿಗೆ ಆ ಅಧಿಕಾರ ಕೊಟ್ಟಿದ್ದು ಯಾರು? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಬಿಜೆಪಿ-ಜೆಡಿಎಸ್ ನಾಯಕರು ಮೇಲ್ಮನೆ ಸಭಾಪತಿಗಳ ಪದಚ್ಯುತಿಗೆ ತೀರ್ಮಾನಿಸಿದ್ದಾರೆ. ಅದು ಅವರ ನಿರ್ಧಾರ. ಅದು ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕೆ ಹೊರತು ನಿಯಮ ಉಲ್ಲಂಘನೆ ಮಾಡುವುದು ಸರಿಯಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.



















































