ಬೆಂಗಳೂರು: ಪ್ರಜ್ವಲ್ ಪ್ರಕರಣದ ಪೆನ್‌ಡ್ರೈವ್ ಹಂಚಿಕ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರವಿದ್ದು, ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ..
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಜ್ವಲ್ ಪ್ರಕರಣ ಬಗ್ಗೆ ಸರ್ಕಾರ ಸರಿಯಾಗಿ ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಕಾಂಗ್ರೆಸ್ ಕಾರಣ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲೆಂದೇ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೀಗೆ ಪ್ಲಾನ್ ಮಾಡಿದ್ದಾರೆ. ಚಿತ್ರಕಥೆಯನ್ನು ಸುರ್ಜೇವಾಲ ಬರೆದಿದ್ದು, ಸಿದ್ದರಾಮಯ್ಯ ನಿರ್ದೇಶನ ಹಾಗೂ ಡಿ.ಕೆ.ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ. ವೀರೇಂದ್ರ ಪಾಟೀಲ್ ಅವರಿಂದ ಅಧಿಕಾರ ಕಿತ್ತುಕೊಂಡು, ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿ ಲಿಂಗಾಯತರಿಗೆ ಕಾಂಗ್ರೆಸ್ ಅಪಮಾನ ಮಾಡಿತ್ತು. ಈಗ ಒಕ್ಕಲಿಗರನ್ನು ಟಾರ್ಗೆಟ್ ಮಾಡಿ ಒಂದು ಲಕ್ಷ ಪೆನ್‌ಡ್ರೈವ್ ತಯಾರು ಮಾಡಿ ಹಂಚಲಾಗಿದೆ. ಎಸ್‌ಐಟಿ ರಬ್ಬರ್ ಸ್ಟಾಂಪ್ ಆಗಿದ್ದು, ಸಿಎಂ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತದೆ. ವೀಡಿಯೋ ಹಂಚುವುದು ಅಪರಾಧ ಎಂದೇ ಎಸ್‌ಐಟಿ ಹೇಳಿದೆ. ಪೆನ್‌ಡ್ರೈವ್ ಕೊಟ್ಟ ಚಾಲಕನನ್ನು ಜೈಲಿಗೆ ಹಾಕಿಲ್ಲ. ಪೆನ್‌ಡ್ರೈವ್ ಹಂಚಿದವರಲ್ಲಿ ಎಷ್ಟು ಜನರನ್ನು ಎಸ್‌ಐಟಿ ಜೈಲಿಗೆ ಹಾಕಿದೆ ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಸರ್ಕಾರದ ಪಾತ್ರವಿದೆ ಎಂದು ಕಾನೂನು ತಜ್ಞರೇ ಹೇಳಿದ್ದಾರೆ. ಆದ್ದರಿಂದ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಅಶೋಕ್ ಆಗ್ರಹಿಸಿದರು.

























































