ಬೆಂಗಳೂರು: ನೈಸ್ ರಸ್ತೆ ಯೋಜನೆ ಹೆಸರಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೈಸ್ ಅಕ್ರಮ ರಾಜ್ಯದಲ್ಲಿ ಹಾಡುಹಗಲೇ ನಡೆದಿರುವ ಲೂಟಿ. ಜನರ ಭೂಮಿ ಹಾಗೂ ಹಣವನ್ನು ಕೊಳ್ಳೆ ಹೊಡೆಯಲಾಗಿದೆ ಎಂದರು.
ರಾಜ್ಯದ ಮುಖ್ಯಮಂತ್ರಿ ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ. ಆದರೆ ನೈಸ್ ರಸ್ತೆಯ ಅಕ್ರಮ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಬಸವರಾಜ ಬೊಮ್ಮಾಯಿ ಅವರ ಸರಕಾರದ ಕಾಲದಲ್ಲಿ ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳು ಜರುಗಿವೆ. ನ್ಯಾಯಾಲಯಗಳಲ್ಲಿ ನೈಸ್ ವಿರುದ್ಧ, ಸರ್ಕಾರದ ಪರವಾಗಿ ಅನೇಕ ಆದೇಶಗಳು ಬಂದಿವೆ. ಇದಕ್ಕೆ ಹಿಂದಿನ ಬಿಜೆಪಿ ಸರಕಾರದ ಶ್ರಮಿಸಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಿದದ್ದೇವು. ಮೊದಲು ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿದೆವು. ಬಳಿಕ ಅದನ್ನು ನಿಯಮ 69ಕ್ಕೆ ಬದಲಿಸಿ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದರು. ಆದರೂ ಅವಕಾಶ ಸಿಗಲಿಲ್ಲ ಎಂದ ಅವರು, ನಾಡಿನ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಜತೆ ಹೋರಾಟಕ್ಕೆ ಮುಂದಾಗಿದ್ದೇವೆ. ಜನರ ಭೂಮಿ ಕಬಳಿಸುವ ಈ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡುತ್ತೇವೆ. ಸರಕಾರ ಸದನ ಸಮಿತಿ ವರದಿ ಇಟ್ಟುಕೊಂಡು ಸುಮ್ಮನಿದ್ದರೆ ಯಾರಿಗೆ ಲಾಭ? ಈ ಯೋಜನೆಯನ್ನೂ ಸ್ಕ್ರಾಪ್ ಮಾಡಿದರೆ ₹30,000 ಕೋಟಿ ಹಣ ಸಿಗುತ್ತದೆ. ಭಾಗ್ಯಗಳಿಗೆ ಅದನ್ನು ಬಳಸಿ ಎಂದರು.
ಈಗ ಬ್ರ್ಯಾಂಡ್ ಬೆಂಗಳೂರು ಎಂದು ಜಪ ಮಾಡುತ್ತಿರುವವರೇ ಹಿಂದೆ ನೈಸ್’ನೊಳಕ್ಕೆ ನೈಸಾಗಿ ಸೇರಿಕೊಂಡು ಸಹಕಾರ ನೀಡಿದ್ದರು. ಈಗ ಅವರೇ ಅಧಿಕಾರದಲ್ಲಿ ಇದ್ದಾರೆ. ಅದಕ್ಕೆ ಎರಡೂ ಪಕ್ಷಗಳ ವತಿಯಿಂದ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೇವೆ. ಅಲ್ಲದೆ; ನೈಸ್ ರಸ್ತೆಯ ಸುತ್ತಮುತ್ತ ನಮ್ಮ ಪಕ್ಷವೂ ಒಳಗೊಂಡಂತೆ ಬೇರೆ ಯಾವುದೇ ಪಕ್ಷದ ರಾಜಕಾರಣಿಗಳ ಭೂಮಿ ಇದ್ದರೆ ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದ ಹೆಚ್ಡಿಕೆ, 2012ರೊಳಗೆ ಕಾಂಕ್ರೀಟ್ ರಸ್ತೆ ಮಾಡದೆ ಟೋಲ್ ಸಂಗ್ರಹ ಮಾಡುವಂತಿಲ್ಲ ಎನ್ನುವ ಷರತ್ತು ಯೋಜನೆಯಲ್ಲಿ ಇದೆ. ಆದರೆ, ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗಿದೆ. ಈವರೆಗೂ ವಸೂಲು ಮಾಡಲಾಗಿರುವ 1325 ಕೋಟಿ ರೂಪಾಯಿ ಟೋಲ್ ಹಣವನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸರಕಾರ ಕೂಡಲೇ ಹಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಯೋಜನೆ ಬಗ್ಗೆ ಮಾತನಾಡಲೇಬಾರದು ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ 2 ಕೋಟಿ, ಮಾಜಿ ಸಚಿವ ಮಾಧುಸ್ವಾಮಿ ಅವರಿಗೆ 5 ಲಕ್ಷ ದಂಡ ಹಾಕಿದ್ದರು. ಈ ಸಂದರ್ಭದಲ್ಲಿ ಬೊಮ್ಮಾಯಿ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡು, ಅದರ ಪರಿಣಾಮವಾಗಿ ಒಂದಿಷ್ಟು ನ್ಯಾಯಾಲಯ ಆ ಕಂಪನಿಗೆ ಛೀಮಾರಿ ಹಾಕಿದೆ. ಈಗ ಅಲ್ಲಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಮಾಡುತ್ತಿದ್ದಾರೆ ಎಂದು ಗಮನಸೆಳೆದ ಹೆಚ್ಡಿಕೆ, ನೈಸ್ ಅಕ್ರಮ ಇತಿಹಾಸದಲ್ಲಿ ಹಿಂದೆಂದೂ ಕಂಡೂ ಕೇಳರಿಯದ ಅಕ್ರಮ. ಇದರ ವಿರುದ್ಧ ಸದನದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ದನಿ ಎತ್ತಿದ್ದಾರೆ. ಅದರ ಅಕ್ರಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಸರಕಾರ ಮೀನಾಮೇಷ ಎಣಿಸದೆ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಇಡೀ ಯೋಜನೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರಕಾರದ ವೇಳೆ ಸಂಪುಟದ ಉಪ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯು ಅನೇಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ. ರಸ್ತೆ ಕಾಮಗಾರಿಗೆ ರೈತರಿಂದ ಸ್ವಾಧೀನಕ್ಕೆ ಪಡೆದ ಭೂಮಿಯನ್ನು ಮಾರಾಟ ಮಾಡಿ ರಿಯಲ್ ಎಸ್ಟೇಟ್ ದಂಧೆ ನಡೆಸಲಾಗಿದೆ ಎಂದವರು ಆರೋಪಿಸಿದರು.

























































