ಬೆಂಗಳೂರು: ರಾಜಧಾನಿ ಬೆಂಗಳೂರು ಪೊಲೀಸರು ಇದೀಗ ಡ್ರಗ್ಸ್ ಮಾಫಿಯಾ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದಾರೆ. ಡ್ರಗ್ ಮಾಫಿಯಾ ಮಟ್ಟಹಾಕಲು ಪಣ ತೊಟ್ಟಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ನಗರದೆಲ್ಲೆಡೆ ಕ್ಷಿಪ್ರ ಕಾರ್ಯಾಚರಣೆಗೆ ಕ್ರಮ ಕೈಗೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ಸಿಸಿಬಿ ಉಪ ಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಗೌಡ, ಅಬ್ದುಲ್ ಆಹ್ವಾದ್ ಸಾರಥ್ಯದಲ್ಲಿ ಸಿಸಿಬಿ ತಂಡ ಭರ್ಜರಿ ಡ್ರಗ್ಸ್ ವಿಚಾರದಲ್ಲಿ ಬೇಟೆಯಲ್ಲಿ ನಿರತರಾಗಿದ್ದು ಈ ವರ್ಷದ ಖಾಕಿ ಕಾರ್ಯಾಚರಣೆ ದೇಶದ ಗಮನ ಸೆಳೆದಿದೆ.
ಈ ನಡುವೆ, ಸಿಸಿಬಿ ಸಹಿತ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣಾವ್ಯಾಪ್ತಿಗಳಲ್ಲಿ ಈ ವರ್ಷ ನೂರು ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 2023 ಆರಂಭದಿಂದಲೇ ಬೆಂಗಳೂರು ನಗರ ಪೊಲೀಸರು ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಿ ನೂರು ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ವರ್ಷಾಂತ್ಯದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 60 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಮೂರು ಸಾವಿರ ಡ್ರಗ್ಸ್ ಪೆಡ್ಲರ್ಸ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾನೂನು ಸುವ್ಯಸ್ಥೆಯ ಜೊತೆಗೆ ಯುವಜನರನ್ನು ಡ್ರಗ್ಸ್ ಮಾಫಿಯಾದಿಂದ ಮುಕ್ತಗೊಳಿಸುವ ವಿಚಾರದಲ್ಲಿ ಪೊಲೀಸರ ವಹಿಸಿರುವ ಕಾಳಜಿ ನಾಗರಿಕರ ಮೆಚ್ಚುಗೆಗೆ ಕಾರಣವಾಗಿದೆ.






















































