ದೆಹಲಿ: ಶಾಲೆಗಳಲ್ಲಿನ ಹಿಜಬ್ ವಿವಾದ ಕುರಿತಂತೆ ರಾಜಕೀಯ ನಾಯಕರು ಕಿತ್ತಾಡತೊಡಗಿದ್ದಾರೆ. ಬಿಜೆಪಿ ಹಾಗೂ ಎದುರಾಳಿ ಪಕ್ಷಗಳ ನಾಯಕರು ತಮ್ಮದೇ ಆದ ಅಭಿಪ್ರಾಯಗಳನ್ನು ಮುಂದಿಡುತ್ತಾ ಕೆಸರೆರಚಾಡುತ್ತಿದ್ದಾರೆ.
ಈ ನಡುವೆ ಹಿಜಬ್ ವಿವಾದದ ಹಿಂದೆ ಬಿಜೆಪಿ-ಆರೆಸ್ಸೆಸ್ ಕೈವಾಡ ಇದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದಲ್ಲಿನ ಹಿಜಬ್ ವಿವಾದ ರಾಷ್ಟ್ರದ ಪಾಲಿಗೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪ್ರತಿಪಾದಿಸಿರುವ ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್, ಭಾರತವು ಸಂವಿಧಾನದ ಮೂಲಕ ನಡೆಯುತ್ತದೆಯೇ ಹೊರತು ಶರಿಯಾ ಕಾನೂನಿನಿಂದಲ್ಲ ಎಂದು ಹೇಳಿದ್ದಾರೆ.
ಪ್ರತಿಯೊಂದು ಸಂಸ್ಥೆಗೂ ತನ್ನದೇ ಆದ ವಸ್ತ್ರ ಸಂಹಿತೆ ರೂಪಿಸುವ ಹಕ್ಕಿದೆ. ಆದರೆ ವ್ಯವಸ್ಥೆಯು ಸಂವಿಧಾನದ ಪ್ರಕಾರ ನಡೆಯಬೇಕಲ್ಲವೇ ಎಂದು ಅಭಿಪ್ರಾಯ ಮುಂದಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ಭಾರತದ ಸಂವಿಧಾನದ ಪ್ರಕಾರ ನಡೆಯಬೇಕು, ಅದು ಎಲ್ಲರ ಹಿತದೃಷ್ಟಿಯಿಂದ ಕೂಡಿರಬೇಕು ಎಂದರು.