ಬೆಂಗಳೂರು: ಕೋವಿಡ್ ಸಂಪೂರ್ಣವಾಗಿ ಹತೋಟಿಗೆ ಬರುವವರೆಗೆ ಮೈ ಮರೆಯಬಾರದು ಎಂದು ರಾಜ್ಯದ ಜನತೆಗೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಇನ್ನೂ ಪೋಸಿಟಿವಿಟಿ ಪ್ರಮಾಣ ಕಡಿಮೆಯಾಗ ಬೇಕಾಗಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗಿ ಸಂಪೂರ್ಣ ಹತೋಟಿಗೆ ಬರಬೇಕು. ಸೋಂಕು ಉಲ್ಬಣವಾಗದಂತೆ ನಾವೇ ನಮ್ಮ ಕಾರ್ಯಚಟುವಟಿಕೆಗಳ ಮೇಲೆ ನಿರ್ಬಂಧ ಹಾಕಿಕೊಳ್ಳಬೇಕು ಎಂದರು.
ಇಷ್ಟು ದಿನಗಳ ಕಾಲ ಸಹಕಾರ ಕೊಟ್ಟಿದ್ದೀರಿ. ಇನ್ನೊಂದು ವಾರದ ಪ್ರಶ್ನೆ ಇದೆ. ಎಲ್ಲರೂ ಕೂಡ ಸಹಕಾರ ಕೊಟ್ಟರೆ ಕೋವಿಡ್ ಖಂಡಿತ ನಿಯಂತ್ರಣಕ್ಕೆ ಬರುತ್ತದೆ. ನಿಯಮಗಳನ್ನು ಪಾಲಿಸಿದರೆ ಬರುವಂತಹ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ. ನಮ್ಮ ಕಾರ್ಯಚಟುವಟಿಕೆಗಳಿಗೆ ಅನುಕೂಲ ಆಗುತ್ತದೆ. ಒಂದು ವೇಳೆ ಉಲ್ಭಣ ವಾದರೆ ಕಷ್ಟ ಆಗುತ್ತದೆ. ಇದನ್ನು ಜನ ಅರ್ಥಮಾಡಿಕೊಳ್ಳಬೇಕು ಎಂದು ಜನರಿಗೆ ಅವರು ಕಿವಿಮಾತು ಹೇಳಿದರು.