ಬೆಂಗಳೂರು: ಸ್ವಯಂ ಉದ್ಯೋಗದಿಂದ ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿರುವ ಗ್ರಾಮ ಮಟ್ಟದ ಸಂಜೀವಿನಿ ಘಟಕಗಳಡಿ ಕಾರ್ಯ ನಿರ್ವಹಿಸುವ 17,121 ಮಹಿಳಾ ಸ್ವಸಹಾಯ ಗುಂಪುಗಳಿಗೆ 149 ಕೋಟಿ ರೂ. ಸಮುದಾಯ ಬಂಡವಾಳ ನಿಧಿಯನ್ನು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತಾ ಇಲಾಖೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು.
ಬೆಂಗಳೂರಿನಲ್ಲಿ ಸಮುದಾಯ ಬಂಡವಾಳ ನಿಧಿ ಬಿಡುಗಡೆ ಜತೆಗೆ ಅತ್ಯುತ್ತಮವಾಗಿ ಕೆಲಸ ಮಾಡಿ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾದ ಸ್ವಸಹಾಯ ಗುಂಪಿಗೆ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ; “ಡೇ-ಎನ್‌ಆರ್‌ಎಲ್‌ಎಂ (ರಾಷ್ಟ್ರೀಯ ಜೀವನೋಪಾಯ ಇಲಾಖೆ) ವತಿಯಿಂದ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳಿಗೆ ಒಳಪಡುವ ಸ್ವಸಹಾಯ ಗುಂಪುಗಳಿಗೆ 14,221.75 ಲಕ್ಷ ರೂ. ಹಾಗೂ ಎನ್‌ಆರ್‌ಇಟಿಪಿ (national rural economic transformation project) ಕಾರ್ಯಕ್ರಮದಡಿ ಕೆಲಸ ಮಾಡುವ 74 ಗ್ರಾಮ ಪಂಚಾಯಿತಿಗಳ ಒಕ್ಕೂಟಗಳಲ್ಲಿರುವ 862 ಸ್ವಸಹಾಯ ಗುಂಪುಗಳಿಗೆ 6.82 ಕೋಟಿ ರೂ. ಸೇರಿ ಒಟ್ಟು 17,121 ಸ್ವಸಹಾಯ ಗುಂಪುಗಳಿಗೆ 149 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ಬಿಡುಗಡೆ ಮಾಡಲಾಗಿದೆ ಎಂದರು.
2021-22ನೇ ಸಾಲಿನಲ್ಲಿ ಈ ಸ್ವಸಹಾಯ ಗುಂಪುಗಳಿಗೆ ಒಟ್ಟು 400 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ಬಿಡುಗಡೆ ಮಾಡಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ ಎಂದು ಡಿಸಿಎಂ ತಿಳಿಸಿದರು.
ಬಂಡವಾಳದ ನೆರವಿನಿಂದ ಸ್ವಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವ ಮಹಿಳೆಯರು ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಸಾಕಣೆ, ಗುಡಿ ಕೈಗಾರಿಕೆ, ಟೈಲರಿಂಗ್, ಹೋಟೆಲ್ ಉದ್ಯಮ ಇತ್ಯಾದಿಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾಬಲಂಬನೆ ಸಾಧಿಸಲು ಸರಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಹೇಳಿದರು.
ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಇದಕ್ಕೆ ಇನ್ನೂ ಹೆಚ್ಚಿನ ಆರ್ಥಿಕ ಶಕ್ತಿ ತುಂಬಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.