ಬೆಂಗಳೂರು: ಸಾರಿಗೆ ಸಂಸ್ಥೆಗಳಲ್ಲಿ 10000 ನೇಮಕಾತಿ ಎರಡುವರೆ ವರ್ಷದ ಅವಧಿಯಲ್ಲಿ ಅನ್ನುವುದು ಸುಲಭದ ಮಾತಲ್ಲ . ಅದರಲ್ಲೂ ಒಂದೇ ಒಂದು ವಿವಾದವಿಲ್ಲದೇ, ಭ್ರಷ್ಟಾಚಾರ ರಹಿ ತ,ಪಾರದರ್ಶಕ ನೇಮಕಾತಿ ಅಂದರೆ ಮೆಚ್ಚಲೇಬೇಕು.
ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1000 ಚಾಲನಾ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಅನುಮೋದನೆ ಪಡೆದು ಆದೇಶ ಕೂಡ ಹೊರಬಿದ್ದಿದೆ. ಈವರೆಗೆ ಕಳೆದ ಎರಡುವರೆ ವರ್ಷದಲ್ಲಿ ನಾಲ್ಕು ನಿಗಮಗಳಲ್ಲಿನ ನೇಮಕಾತಿ ವಿವರ, ಅನುಕಂಪದ ನೌಕರಿಯೂ ಒಳಗೊಂಡು ಒಟ್ಟು 9989. (ಕೆಎಸ್ಸಾರ್ಟಿಸಿ-2800, ಬಿಎಂಟಿಸಿ- 2828, ವಾಯವ್ಯ ರಸ್ತೆ ಸಾರಿಗೆ- 2261, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ – 2900).
ಕೋವಿಡ್ -19 ರ ಹಿನ್ನೆಲೆಯಲ್ಲಿ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಬಿ.ಜೆ.ಪಿ ಸರ್ಕಾರವು ತಡೆಹಿಡಿದಿತ್ತು. ಹಲವು ಬಾರಿ ವಾಯವ್ಯ ಸಾರಿಗೆ ಸಂಸ್ಥೆಯವರು ನಿರಂತರವಾಗಿ 2023 ರವರೆಗೆ 2 ವರ್ಷ 8 ತಿಂಗಳುಗಳ ಕಾಲ ಮನವಿಯನ್ನು ಸಲ್ಲಿಸಿದರೂ ಅನುಮತಿ ನೀಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರ 1.03.2024 ರ ಆದೇಶದಲ್ಲಿ ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಗೆ ಅನುಮೋದನೆ ನೀಡಲಾಗಿದೆ.
2019 ರಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ಕೇವಲ ಚಾಲಕರ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ವಾಯವ್ಯ ಸಾರಿಗೆ ಸಂಸ್ಥೆಯ ಮನವಿ ಮೇರೆಗೆ, ನಿರ್ವಾಹಕ ಹುದ್ದೆಗಳನ್ನು ಭರ್ತಿಮಾಡಲು ಅಧಿಸೂಚನೆಯಲ್ಲಿ ಮಾರ್ಪಾಡು ಮಾಡಿ 1000 ನಿರ್ವಾಹಕ ಹುದ್ದೆಗಳಿಗೆ ಅನುಮತಿ ನೀಡಲಾಗಿತ್ತು. ಈ ಸಂಬಂಧ ಅಭ್ಯರ್ಥಿಗಳು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಿ, ಈಗಾಗಲೇ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ಅಭ್ಯರ್ಥಿಗಳ ವಯೋಮಿತಿ ಮೀರಿದ್ದು, ಬೇರೆ ಯಾವುದೇ ಸರ್ಕಾರಿ ಹುದ್ದೆಗೆ ಅರ್ಹರಾಗಿರುವುದಿಲ್ಲ. ಆದ್ದರಿಂದ ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಕೋರಿದ್ದರು.
ಹುಬ್ಬಳ್ಳಿಯಲ್ಲಿ ಅಭ್ಯರ್ಥಿಗಳು ಈ ಸಂಬಂಧ ಪ್ರತಿಭಟನೆ ನಡೆಸುತ್ತಿದ್ದಾಗ ಬೊಮ್ಮಾಯಿ ಅವರು, ಪ್ರಹ್ಲಾದ್ ಜೋಷಿ ಅವರು ಇತರೆ ಬಿ.ಜೆ.ಪಿ ಮುಖಂಡರು ತಮ್ಮ ಅವಧಿಯಲ್ಲಿ ತಡೆಹಿಡಿದಿದ್ದ ನೇಮಕಾತಿಯನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನುಮತಿ ನೀಡಿಸುವ ಬಗ್ಗೆ ಭರವಸೆ ಕೊಟ್ಟರು. ಹೆಚ್ ಕೆ ಪಾಟೀಲ್, ಸಂತೋಷ್ ಲಾಡ್, ರಾಜು ಕಾಗೆ ಸಹ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದರು. ಅಂದರೆ ಬಿ.ಜೆ.ಪಿ ಯ ನಾಯಕರಿಗೆ ತಮ್ಮ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರದ ಅದರಲ್ಲೂ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ರವರ ಮೇಲಿನ ಬಲವಾದ ನಂಬಿಕೆ ಮತ್ತು ಭರವಸೆ ಎಷ್ಟಿದೆ ಎಂಬುದು ಅರ್ಥವಾಗಿದೆ ಎಂದು ಸಾರಿಗೆ ತಜ್ಞರು ವಿಶ್ಲೇಷಿಸಿದ್ದಾರೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಹುಬ್ಬಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಭೇಟಿ ಮಾಡಿ, ತಮ್ಮಗಳ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ, ನ್ಯಾಯ ಒದಗಿಸಲಾಗುವುದು. ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನಿಸಿ, ಮುಂದಿನ ಬೆಳಗಾವಿ ಅಧಿವೇಶನಕ್ಕೂ ಮುಂಚೆಯೇ ತಮಗೆ ಸಂತೋಷದ ಸುದ್ದಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ, ಸಚಿವ ಸಂಪುಟ ಸಭೆಯಲ್ಲಿ 2019 ರ ಅಧಿಸೂಚನೆಗೆ ಅನುಗುಣವಾಗಿ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1000 ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ಪಡೆದು, ಆಧಿಕೃತ ಆದೇಶವನ್ನು ಸಹ ಹೊರಡಿಸಲಾಗಿದೆ. ಸಾರಿಗೆ ಸಚಿವರ ಈ ಬದ್ಧತೆ ನೌಕರಿ ಆಕಾಂಕ್ಷಿಗಳ ಮೆಚ್ಚುಗೆಗೆ ಪಾತ್ರವಾಗಿದೆ.



















































