ದಾವಣಗೆರೆ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಆರೋಪಿ ಸಿನಿಮೀಯ ರೀತಿ ಸಿಕ್ಕಿ ಬಿದ್ದಿದ್ದಾನೆ. ಮತ್ತೋರ್ವ ಮಹಿಳೆ ಮೇಲೂ ರೈಲಿನಲ್ಲಿ ಹಲ್ಲೆ ಮಾಡಿದ ಈತ ಸಾರ್ವಜನಿಕರಿಂದ ಧರ್ಮದೇಟು ತಿಂದು ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಅಂಜಲಿ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಗಿರೀಶ ಸಾವಂತ ಬೆಂಗಳೂರಿನಿಂದ ದಾವಣಗೆರೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಆಕೆ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಗಿರೀಶನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ರೈಲ್ವೇ ಪೊಲೀಸರ ನೆರವಿನಲ್ಲಿ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಹುಬ್ಬಳ್ಳಿ ಪೊಲೀಸರು ತಡರಾತ್ರಿಯೇ ಗಿರೀಶನನ್ನು ವಶಕ್ಕೆ ಪಡೆದಿದ್ದಾರೆ.
ಈ ನಡುವೆ, ರೈಲಿನಲ್ಲಿ ನಡೆದ ಘಟನೆ ಕುರಿತಂತೆ ದಾವಣಗೆರೆ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




















































