ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ನೋಟಿಸ್ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಡಳಿತರೂಢ ಬಿಜೆಪಿ ಮಂಗಳವಾರ ಪ್ರತಿಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವನ್ನು ರಾಜಕೀಯದಿಂದಲೇ “ಪದಚ್ಯುತಿಗೊಳಿಸುವ” ಕಾಲ ಬಂದಿದೆ ಎಂದು ಬಿಜೆಪಿ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, “ತಮ್ಮದೇ ತಪ್ಪುಗಳಿಂದಾಗಿ ಜನರಿಂದ ತಿರಸ್ಕೃತಗೊಂಡವರು ಈಗ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಪದಚ್ಯುತಗೊಳಿಸಲು ಯತ್ನಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ–ಎನ್‌ಡಿಎ ಸರ್ಕಾರ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ, ಕಾಂಗ್ರೆಸ್ ಹಾಗೂ ಅದರ ಮೈತ್ರಿಪಕ್ಷಗಳು ಅಮೆರಿಕ ಮೂಲದ ಉದ್ಯಮಿ ಜಾರ್ಜ್ ಸೊರೊಸ್ ಅವರ ಸೂಚನೆಯ ಮೇರೆಗೆ ಸಾಂವಿಧಾನಿಕ ಸಂಸ್ಥೆಗಳು ಮತ್ತು ಹುದ್ದೆಗಳ ವಿರುದ್ಧ ದಾಳಿ ನಡೆಸುತ್ತಿವೆ ಎಂದು ಸಂಬಿತ್ ಪಾತ್ರಾ ಆರೋಪಿಸಿದರು.
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿಯನ್ನು ಇಡೀ ದೇಶ ಗಮನಿಸುತ್ತಿದೆ. ರಾಹುಲ್ ಗಾಂಧಿಯ ಸೂಚನೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಘೇರಾವ್ ಮಾಡಿ ಅವಮಾನಿಸುವ ಸಂಚು ರೂಪಿಸಲಾಗಿತ್ತು ಎಂದು ಅವರು ಆರೋಪಿಸಿದರು.
“ಇದು ಯಾವ ರೀತಿಯ ರಾಜಕೀಯ ಚಿಂತನೆ? ಇದರ ಬಗ್ಗೆ ಇಡೀ ದೇಶ ಚಿಂತಿಸಬೇಕಾಗಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ರಾಜಕೀಯದಿಂದಲೇ ದೂರ ಮಾಡುವ ಕಾಲ ಸನ್ನಿಹಿತವಾಗಿದೆ” ಎಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಬಿತ್ ಪಾತ್ರಾ ಹೇಳಿದರು.






















































