ಹುಬ್ಬಳ್ಳಿ: ಕಾಂಗ್ರೆಸ್ಸಿನ ರಣದೀಪ್ ಸುರ್ಜೇವಾಲ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ. ಅವರು ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿ ಆಮೇಲೆ ಕರ್ನಾಟಕದ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ತಮ್ಮ ನೇತೃತ್ವದ ಸರ್ಕಾರ ನರಕ ಸೃಷ್ಟಿಯಾಗಿದೆ ಎಂದಿರುವ ಸುರ್ಜೇವಾಲಾ ಅವರ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಸೃಷ್ಟಿಸಿದ್ದ ನರಕದಿಂದಲೇ ಅವರನ್ನು ಮನೆ ಜನ ಕಳುಹಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಿದು. ಜನರಿಗೆ ತಮ್ಮ, ನಮ್ಮ ವೈಫಲ್ಯಗಳನ್ನು ತೋರಿಸುವ ಬದಲು ಈ ರೀತಿಯ ಮಾತುಗಳು ಜನರ ಮೇಲೆ ಪ್ರಭಾವ ಬೀರುವುದಿಲ್ಲ ಎಂದರು.
ಬಿಜೆಪಿ ಅಸುರರು, ಬೊಮ್ಮಾಯಿ ಅವರು ಭ್ರಷ್ಟಾಸುರ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಜನರಿಗೆ ಯಾರು ಅಸುರರು, ಯಾರು ದೇವತೆಗಳು ಎಂದು ಗೊತ್ತಿದೆ. 70 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ನ್ನು ಕಿತ್ತೊಗೆದು ಅಸುರರು ಯಾರೆಂದು ತೋರಿಸಿದ್ದಾರೆ. ಕಾಂಗ್ರೆಸ್ ನಲ್ಲಿರುವ ಅಸುರರ ದೊಡ್ಡ ಪಟ್ಟಿಯೇ ಇದೆ ಎಂದರು.
ನಕಲು ಮಾಡುವಾಗ ಬುದ್ದಿ ಇರಬೇಕೆಂದಿರುವ ಹೇಳಿಕೆಗೆ ಉತ್ತರಿಸಿ ಅವರಿಗೂ ನಮಗೂ ಬಹಳ ವ್ಯತ್ಯಾವಿದೆ. ಅವರು ಚುನಾವಣೆಗಾಗಿ ಆಕಾಶವನ್ನು ತೋರಿಸಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡಿದ್ದಾರೆ. ನಾವು ಯಾವುದಕ್ಕಾಗಿ, ಯಾರಿಗೆ, ಎಷ್ಟು ಹಣವಾಗುತ್ತದೆ ಎಂದು ವಿವರಿಸಿದ್ದೇವೆ. ಅವರು ನಮ್ಮನ್ನು ನಕಲು ಮಾಡಿದ್ದಾರೆ. ನಾವು ಗೃಹಿಣಿ ಶಕ್ತಿ ನೀಡಿದ ಮೇಲೆ ಗೃಹಲಕ್ಷ್ಮಿ ಯೋಜನೆ ಘೋಷಿಸಿದ್ದಾರೆ. ಆದ್ದರಿಂದ ಸುರ್ಜೇವಾಲಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದರು.
ಕಳೆದ ಬಾರಿ ಆಯವ್ಯಯ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಬಹುತೇಕ ಶೇ 90 ರಷ್ಟು ಆದೇಶಗಳನ್ನು ಹೊರಡಿಸಲಾಗಿದೆ. ಅದೇ ರೀತಿ ಈ ಬಾರಿಯೂ ಕೂಡ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅನುಷ್ಠಾನ ಸಮಿತಿ ರಚಿಸಿ ಅನುಷ್ಠಾನ ಮಾಡಲಾಗುವುದು ಎಂದರು.