ಬೆಂಗಳೂರು: ಗುತ್ತಿಗೆದಾರ ಸಚಿನ್ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಸಚಿವ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಜನವರಿ 4 ರಂದು ಕಲಬುರ್ಗಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಬಿಜೆಪಿ ಆಯೋಜಿಸಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಜನವರಿ 4 ರಂದು ಕಲಬುರ್ಗಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಹೋರಾಟ ನಡೆಯಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಮೃತ ಸಚಿನ್ ಅವರ ಡೆತ್ ನೋಟ್ ನಲ್ಲಿದೆ. ಸಚಿವರ ಆಪ್ತನೇ ಈ ಘಟನೆಗೆ ಕಾರಣ. ಆದರೆ ಎಐಸಿಸಿ ಅಧ್ಯಕ್ಷರ ಮಗನಾಗಿರುವುದರಿಂದ ಅವರ ರಾಜೀನಾಮೆ ಪಡೆಯದೆ ಸಿಎಂ ಸಿದ್ದರಾಮಯ್ಯ ಗಡಗಡ ನಡುಗುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಸರ್ಕಾರದ ಒತ್ತಡ ತಾಳಲಾಗದೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದು ಕೊಲೆಗಡುಕ ಸರ್ಕಾರವಾಗಿದೆ ಎಂದರು.
ಗೋ ರಕ್ಷಣೆ ಎನ್ನುವುದು ಭಾರತದ ಸಂಸ್ಕೃತಿ. ಇದಕ್ಕಾಗಿ ಬಿಜೆಪಿ ಸರ್ಕಾರ ಯೋಜನೆ ರೂಪಿಸಿತ್ತು. ಈಗಿನ ಪಾಪರ್ ಸರ್ಕಾರ ಗೋವಿನ ಅನ್ನಕ್ಕೂ ಕನ್ನ ಹಾಕಿದೆ ಎಂದು ಅಶೋಕ್ ದೂರಿದರು.