ಬೆಂಗಳೂರು: ರಾಜ್ಯ ಸರ್ಕಾರ ಕಮೀಷನ್ ದಂಧೆಯಲ್ಲಿ ತೊಡಗಿದೆ ಎಂದು ಆರೋಪಿಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಈ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸದ ಸರ್ಕಾರದ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೀಗ ಶಿಕ್ಷಣ ಇಲಾಖೆಯಲ್ಲಿನ ಕಮೀಷನ್ ಆರೋಪ ಕುರಿತಂತೆಯೂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, ಗುತ್ತಿಗೆದಾರರು ಸರ್ಕಾರದ 40% ಕಮಿಷನ್ ಬಗ್ಗೆ ಪ್ರಧಾನಿಗೆ ಬರೆದ ಪತ್ರಗಳಿಗೆ ಉತ್ತರ ಸಿಕ್ಕಿಲ್ಲ. ಈಗ ಖಾಸಗಿ ಶಾಲೆಗಳ ಆಡಳಿತವೂ ಪ್ರಧಾನಿಗೆ ಪತ್ರ ಬರೆದಿದೆಯಂತೆ. ಮುಖ್ಯಮಂತ್ರಿಯವರು ಈ ಎಲ್ಲ ಪತ್ರಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನಿಗಾವಣೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಇದು ಶಿಕ್ಷಣವೋ? ಭಕ್ಷಣೆಯೋ? ಎಂದು ಪ್ರಶ್ನಿಸುತ್ತಾ ಬಿಜೆಪಿ ಸರ್ಕಾರವನ್ಬು ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ, ಆರ್ಟಿಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಬಿಜೆಪಿ ಸರ್ಕಾರ ಸುಮಾರು ರೂ.900 ಕೋಟಿ ಬಾಕಿ ಪಾವತಿಸಬೇಕಂತೆ. ಶಿಕ್ಷಣ ಸಚಿವರು 40% ಕಮಿಷನ್ ಲೆಕ್ಕ ಹಾಕುತ್ತಿರುವಂತೆ ಕಾಣುತ್ತಿದೆ. ಕಮಿಷನ್ ಎಂಬ ಸಾಂಕ್ರಾಮಿಕ ರೋಗ ಶಿಕ್ಷಣ ಇಲಾಖೆಯನ್ನೂ ರೋಗಗ್ರಸ್ತ ಗೊಳಿಸಿದೆ ಎಂದೂ ಟ್ವೀಟ್ ಮಾಡಿದ್ದಾರೆ.
ಆರ್ ಟಿ ಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ @BJP4Karnataka ಸರ್ಕಾರ ಸುಮಾರು ರೂ.900 ಕೋಟಿ ಬಾಕಿ ಪಾವತಿಸಬೇಕಂತೆ.
ಶಿಕ್ಷಣ ಸಚಿವರು 40% ಕಮಿಷನ್ ಲೆಕ್ಕ ಹಾಕುತ್ತಿರುವಂತೆ ಕಾಣುತ್ತಿದೆ. ಕಮಿಷನ್ ಎಂಬ ಸಾಂಕ್ರಾಮಿಕ ರೋಗ ಶಿಕ್ಷಣ ಇಲಾಖೆಯನ್ನೂ ರೋಗಗ್ರಸ್ತ ಗೊಳಿಸಿದೆ.ಇದು ಶಿಕ್ಷಣವೋ? ಭಕ್ಷಣೆಯೋ @BCNagesh_bjp? 5/7#ಭಕ್ಷಣಾಸಚಿವ pic.twitter.com/aNOBsMTD8e
— Siddaramaiah (@siddaramaiah) September 4, 2022
ಕಾಂಗ್ರೆಸ್ನ ಮಹತ್ವಾಕಾಂಕ್ಷೆಯ ಶಿಕ್ಷಣ ಹಕ್ಕಿನ ಕಾಯ್ದೆಯನ್ನೂ ರಾಜ್ಯ ಶಿಕ್ಷಣ ಇಲಾಖೆ ಹಳ್ಳ ಹಿಡಿಸಿದೆ. 2012ರಲ್ಲಿ ಆರ್ ಟಿ ಇ ಫಲಾನುಭವಿ ವಿದ್ಯಾರ್ಥಿಗಳು 1.20 ಲಕ್ಷ, ಈಗ ಈ ವಿದ್ಯಾರ್ಥಿಗಳ ಸಂಖ್ಯೆ 7 ಸಾವಿರಕ್ಕೆ ಇಳಿದಿದೆ. ಖಾಸಗಿ ಶಾಲೆಗಳಿಗೆ ರಾಜ್ಯ ಬಿಜೆಪಿ ಸರ್ಕಾರದಿಂದಲೇ ಬೆಂಬಲ ಇದೆ ಎಂದೂ ಅವರು ಆರೋಪಿಸಿದ್ದಾರೆ.
ಖಾಸಗಿ ಶಾಲೆಗಳ ಪರವಾನಿಗೆಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೆ ಯಾವ ಕೆಲಸವೂ ಆಗುತ್ತಿಲ್ಲವಂತೆ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಅಕ್ರಮವಾಗಿ ಅನುಮತಿ ನೀಡುವ ಇಲಾಖೆಯೇ, ಮತ್ತೆ ಅಕ್ರಮ ಎಸಗಿದ ಆರೋಪದ ಮೇಲೆ ದುಡ್ಡು ವಸೂಲಿ ಮಾಡುತ್ತಿದೆಯಂತೆ. ಎಂಥಾ ಅದ್ಭುತ ಪ್ಲಾನ್? ಎಂದು ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ದ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.