ಬೆಂಗಳೂರು: ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಧಾರವಾಡದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪರೀಕ್ಷಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸರ್ಕಾರದ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ‘ಕುರ್ಚಿ ಕುಸ್ತಿ’ ಯಲ್ಲಿ ಸ್ತಬ್ದವಾಗಿರುವ ಆಡಳಿತದಿಂದ ನೇಮಕಾತಿಗಳು ಆಗದೆ ಪರೀಕ್ಷಾರ್ಥಿಗಳ ಶ್ರಮ ಫಲ ನೀಡದೆ ಇದ್ದರೆ ಇನ್ನೊಂದು ಕಡೆ ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ. ಸರ್ಕಾರದಿಂದ ಪರೀಕ್ಷಾರ್ಥಿಗಳಿಗೆ ಯಾವುದೇ ಸ್ಪಷ್ಟ ಭರವಸೆ ಇಲ್ಲದೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ ಎಂದಿದ್ದಾರೆ.
ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಧಾರವಾಡದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪರೀಕ್ಷಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ.
'ಕುರ್ಚಿ ಕುಸ್ತಿ' ಯಲ್ಲಿ ಸ್ತಬ್ದವಾಗಿರುವ ಆಡಳಿತದಿಂದ ನೇಮಕಾತಿಗಳು ಆಗದೆ ಪರೀಕ್ಷಾರ್ಥಿಗಳ ಶ್ರಮ ಫಲ ನೀಡದೆ ಇದ್ದರೆ ಇನ್ನೊಂದು ಕಡೆ ವಯೋಮಿತಿ ಮೀರುವ… pic.twitter.com/4cGjlRPC1n
— Basanagouda R Patil (Yatnal) (@BasanagoudaBJP) December 1, 2025
ಪರೀಕ್ಷಾರ್ಥಿಗಳ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಸರ್ಕಾರ ನಿರ್ದಿಷ್ಟ ಕಾಲಮಿತಿಯಲ್ಲಿ ಈಡೇರಿಸಲೇಬೇಕು. ಇಲ್ಲದಿದ್ದರೆ ಯುವ ಸಮೂಹದ ಕಿಚ್ಚಿನಿಂದ ಸರ್ಕಾರ ಪತನವಾಗುವುದು ನಿಶ್ಚಿತ ಎಂದಿರುವ ಯತ್ನಾಳ್, ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು ಎಂಬುದನ್ನು ಪೊಲೀಸರು ಹಾಗೂ ಸರ್ಕಾರ ಮರೆಯಬಾರದು. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಯುವ ಸಮೂಹವನ್ನು ವಶಕ್ಕೆ ಪಡೆದು ದೌರ್ಜನ್ಯವೆಸಗುವುದು ಅಸಂವಿಧಾನಿಕ ನಡೆ ಎಂದು ಆರೋಪಿಸಿದ್ದಾರೆ.
ವಶಕ್ಕೆ ಪಡೆದುಕೊಂಡಿರುವ ಯುವಕ/ಯುವತಿಯರನ್ನು ಪೊಲೀಸರು ಕೂಡಲೇ ಬಿಡುಗಡೆಗೊಳಿಸಬೇಕು. ಹಾಗೂ ಅವರಿಗೆ ಪ್ರತಿಭಟನೆ ಮಾಡಲು ಸರ್ಕಾರ ಅವಕಾಶ ನೀಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.





















































