ಬೆಂಗಳೂರು,ಡಿ 16: ಡಿಸೆಂಬರ್ 26 ರಂದು 2019ರ ಸಾಲಿನ ಕೊನೆಯ ಸೂರ್ಯಗ್ರಹಣಕ್ಕೆ ನಾವು ನೀವೆಲ್ಲರೂ ಸಾಕ್ಷಿಯಾಗಲಿದ್ದೇವೆ. ಬಹಳ ಅಪರೂಪಕ್ಕೆ ಎಂಬಂತೆ ಕಾಣುವ ಕಂಕಣ ಸೂರ್ಯಗ್ರಹಣ ಅಂದು ಸಂಭವಿಸಲಿದೆ. ಸೂರ್ಯಗ್ರಹಣದಲ್ಲಿ ಖಗ್ರಾಸಗ್ರಹಣ (ಪೂರ್ಣ ಪ್ರಮಾಣದ ಗ್ರಹಣ) ಹಾಗೂ ಕಂಕಣಗ್ರಹಣ (ಭಾಗಶಃ ಗ್ರಹಣ) ಎಂಬ ಎರಡು ಬಗೆ ಇವೆ. ವರ್ಷಾಂತ್ಯಕ್ಕೆ ಕಾಣಿಸುತ್ತಿರುವುದು ಕಂಕಣ ಸೂರ್ಯಗ್ರಹಣ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. 2010 ರಲ್ಲಿ ಭಾರತದಲ್ಲಿ ಈ ಹಿಂದೆ ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು.
ಸೂರ್ಯ ಗ್ರಹಣವು ಇದೇ ಡಿಸೆಂಬರ್ 26ರಂದು ಮುಂಜಾನೆ 8.5ಕ್ಕೆ ಗ್ರಹಣ ಸಮಯ ಆರಂಭವಾಗುವುದು. ನಂತರ 11.4ಕ್ಕೆ ಗ್ರಹಣ ಬಿಡಲಿದೆ. ಬೆಳಿಗ್ಗೆ9 ರ ಸುಮಾರು ಇದರ ಪೂರ್ಣ ದರ್ಶನವಾಗಲಿದೆ. ಸುಮಾರು 2 ಗಂಟೆ 59 ನಿಮಿಷಗಳ ಕಾಲ ಗ್ರಹಣ ಕಾಲವಿರುತ್ತದೆ.
ಈ ಸೂರ್ಯಗ್ರಹಣ ಭಾರತದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಕಾಣಿಸಿಕೊಳ್ಳಲಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಶೇ 90 ರಷ್ಟು ಕಂಡರೆ, ಉಳಿದ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.