ಬೆಂಗಳೂರು, ವಕ್ಫ್ ಮಂಡಳಿ ಹಿಂದೂಗಳು ಹಾಗೂ ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದು, ಈ ಹೋರಾಟಕ್ಕೆ ತಕ್ಕ ಮಟ್ಟಿನ ಜಯ ಸಿಕ್ಕಿದೆ. ಬಿಜೆಪಿಯ ಹೋರಾಟಕ್ಕೆ ಮಣಿದ ಸರ್ಕಾರ ಸಮಿತಿ ರಚನೆಗೆ ತೀರ್ಮಾನಿಸಿದೆ. ಜೊತೆಗೆ ಬಾಣಂತಿಯರ ಸಾವಿನ ಪ್ರಕರಣವನ್ನೂ ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ಹತ್ತು ದಿನ ನಿಗದಿಯಾಗಿತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಇದೆ ಎಂದು ಅದನ್ನು 9 ದಿನಕ್ಕೆ ಇಳಿಕೆ ಮಾಡಲಾಯಿತು. ಬಸವಣ್ಣನವರ ವರ್ಣಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಒಂದು ದಿನ ಕಳೆಯಿತು. ಉಳಿದಿದ್ದು ಏಳು ದಿನ ಮಾತ್ರ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನದಿಂದ ಎರಡು ದಿನ ಸದನ ನಡೆಯಲಿಲ್ಲ. ಉಳಿದಂತೆ ಬಿಜೆಪಿಗೆ ಚರ್ಚೆಗೆ ಕೇವಲ ಐದು ದಿನ ದೊರೆತಿದ್ದು, ವಕ್ಫ್ ಬೋರ್ಡ್, ಬಾಣಂತಿಯರ ಸಾವು, ಅನುದಾನ ತಾರತಮ್ಯ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಿ ಸರ್ಕಾರವನ್ನು ಕಟ್ಟಿ ಹಾಕುವ ಕೆಲಸ ಮಾಡಿದ್ದೇವೆ. ಇದಕ್ಕೆ ಸಹಕರಿಸಿದ ಎಲ್ಲ ಶಾಸಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಸದನದಲ್ಲಿ ಒಟ್ಟು ಎರಡು ಗಂಟೆಗಳ ಕಾಲ ನಾನು ವಕ್ಫ್ ಬೋರ್ಡ್ ವಿಚಾರವಾಗಿ ದಾಖಲೆ ಸಮೇತ ಮಾತನಾಡಿದ್ದೇನೆ. ಸರ್ಕಾರದ ಆದೇಶ, ಕೋರ್ಟ್ ಆದೇಶ, ಬ್ರಿಟಿಷರಿಂದ ಆರಂಭವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದವರೆಗೂ ಯಾವ ರೀತಿ ಮುಸ್ಲಿಮರನ್ನು ವೋಟ್ ಬ್ಯಾಂಕ್ ಆಗಿ ಹಂತ ಹಂತವಾಗಿ ಬಳಕೆ ಮಾಡಲಾಗಿದೆ ಎಂದು ವಿವರಿಸಿದ್ದೇನೆ ಎಂದರು.
ಮುಸ್ಲಿಮರ ಆಸ್ತಿ ಕಬಳಿಕೆ ತಡೆಯಲು ಬ್ರಿಟಿಷರು ವಕ್ಫ್ ಬೋರ್ಡ್ ಸ್ಥಾಪಿಸಿದರು. ಆದರೆ ಕಾಂಗ್ರೆಸ್ನವರು ಮುಸ್ಲಿಮರಿಗೆ ಅನುಕೂಲವಾಗುವ ಕಾಯಿದೆ ತಂದರು. ಮುಸ್ಲಿಮರಿಗೆ ಹಿಂದೂಗಳಿಗಿಂತ ಎತ್ತರದ ಸ್ಥಾನ ನೀಡಿದರು. ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ವಕ್ಫ್ ಬೋರ್ಡ್ಗೆ ವಿಶೇಷ ಅಧಿಕಾರಗಳನ್ನು ಕೊಟ್ಟರು. ಮನಮೋಹನ್ ಸಿಂಗ್ ಅವರಂತೂ ಒನ್ಸ್ ವಕ್ಫ್ ಬೋರ್ಡ್ ಅಲ್ ವೇಸ್ ವಕ್ಫ್ ಬೋರ್ಡ್ ಎಂಬ ಕಾನೂನು ತಂದರು. ಇವರು ಈ ಕಾನೂನು ಮಾಡಿದ ಬಳಿಕ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ವಕ್ಫ್ ಬೋರ್ಡ್ ಸೇರಿತು ಎಂದು ದೂರಿದರು.
ಕರ್ನಾಟಕದಲ್ಲಿ ವಕ್ಫ್ ವೆಬ್ಸೈಟ್ನಲ್ಲಿ 1.11 ಲಕ್ಷಕ್ಕೂ ಹೆಚ್ಚು ಎಕರೆ ಜಮೀನು ಸ್ವಾಧೀನದಲ್ಲಿದೆ ಎಂದಿದೆ. ಅದರಲ್ಲಿ 86 ಸಾವಿರ ಎಕರೆ ವಿವಾದದಲ್ಲಿದೆ. ಚಿಕ್ಕಬಳ್ಳಾಪುರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಓದಿದ ಶಾಲೆಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸಿ ಅಲ್ಲಿ ಮಸೀದಿ ಕಟ್ಟಿದ್ದಾರೆ. ರಾಷ್ಟ್ರಧ್ವಜ ಹಾರಿಸಬೇಕಾದ ಜಾಗದಲ್ಲಿ ಹಸಿರು ಧ್ವಜ ಹಾರಿಸುತ್ತಿದ್ದಾರೆ. ಬೀದರ್ನಲ್ಲಿ 560 ಎಕರೆ ಇರುವ ಹಳ್ಳಿಯನ್ನು ವಕ್ಫ್ ಬೋರ್ಡ್ ಆಸ್ತಿ ಮಾಡಿಬಿಟ್ಟಿದ್ದಾರೆ. ಇಷ್ಟೆಲ್ಲ ವಿಚಾರಗಳನ್ನು ಮಂಡಿಸಿದ ಬಳಿಕ ನಮ್ಮ ಹೋರಾಟಕ್ಕೆ ಮಣಿದ ಸರ್ಕಾರ, ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚಿಸುತ್ತೇವೆ ಎಂದು ಭರವಸೆ ನೀಡಿದೆ. ಇದು ಬಿಜೆಪಿಯ ಹೋರಾಟಕ್ಕೆ ಸಂದ ಜಯ. ಈಗ ಸರ್ಕಾರ ನ್ಯಾಯಾಂಗ ತನಿಖೆಗೆ ನಿರ್ಧರಿಸಿದೆ. ಯಾವೆಲ್ಲಾ ರೈತರಿಗೆ ಅನ್ಯಾಯ ಆಗಿದೆ ಅವರು ಈಗ ಮನವಿ ಸಲ್ಲಿಸಬಹುದು. ಈ ಮೂಲಕ ವಕ್ಫ್ ಬೋರ್ಡ್ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದರು.
ಬಾಣಂತಿಯರು ಹಾಗೂ ನವಜಾತ ಶಿಶುಗಳ ಸಾವಿಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಬಹಳಷ್ಟು ಚರ್ಚೆ ಮಾಡಿದ್ದೇವೆ. ಅವಧಿ ಮುಗಿದ ಔಷಧಿ ಬಗ್ಗೆಯೂ ದಾಖಲೆ ಕೊಟ್ಟಿದ್ದೇನೆ. ಆರೋಗ್ಯ ಸಚಿವರ ರಾಜೀನಾಮೆಗೂ ಸದನದಲ್ಲಿ ಆಗ್ರಹಿಸಿದ್ದೇವೆ. ಇದನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರ ಒಪ್ಪಿದೆ. ಇದು ಕೂಡ ವಿಧಾನಸಭೆಯ ಒಳಗೆ ಬಿಜೆಪಿಯ ಹೋರಾಟಕ್ಕೆ ಸಿಕ್ಕ ಜಯ ಎಂದು ತಿಳಿಸಿದರು.