ಬೆಂಗಳೂರು: “ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಎಡವಿದೆ ಎಂದು ಪರಾಮರ್ಶನೆ ನಡೆಸಿ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಎದುರಿಸಲು ಸಿದ್ದತೆ ಮಾಡಿಕೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಸತ್ಯ ಶೋಧನಾ ಸಮಿತಿ ಸಭೆ ಬಗ್ಗೆ ಮಾಹಿತಿ ಹಂಚಿಕೊಂಡರು. “ಲೋಕಸಭೆಯಲ್ಲಿ 1 ಸ್ಥಾನ ಹೊಂದಿದ್ದವರು ಈಗ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ನಾವು 14-15 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಲ್ಲಿ ಎಡವಿದ್ದೇವೆ ಎಂದು ಎಐಸಿಸಿಯ ಸಮಿತಿ ಸಮ್ಮುಖದಲ್ಲಿ ಪರಾಮರ್ಶನೆ ನಡೆಯಲಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಅತ್ಯುತ್ತಮ ಅಭ್ಯರ್ಥಿಗಳನ್ನು ನಾವು ಕಣಕ್ಕಿಳಿಸಿದ್ದೆವು. ಎಲ್ಲಾ ಕಡೆ ಒಟ್ಟಾಗಿ ಚುನಾವಣೆ ನಡೆಸಲಾಗಿತ್ತು. ಆದರೆ ಜನರ ಮಧ್ಯೆ ಗುಪ್ತಗಾಮಿನಿಯಲ್ಲಿ ಯಾವ ವಿಚಾರ ಪರಿವರ್ತನೆ ಮಾಡಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪರಿಣಾಮಕಾರಿಯಾಗಲಿದೆ ಎಂದು ನಾವು ಮೊದಲೇ ಅಂದಾಜಿಸಿದ್ದೆವು. ಮುಂದಿನ ದಿನಗಳಲ್ಲೂ ಅವರು ಒಟ್ಟಾಗಿರುತ್ತಾರೆ ಎಂದು ನಮಗೆ ಗೊತ್ತಿದೆ. ಅವರು ಹಾಗೆಯೇ ಇರಲಿ. ಅವರು ಒಟ್ಟಾಗಿದ್ದರೂ ನಾವು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕೋ ಮಾಡುತ್ತೇವೆ.” ಎಂದರು.
ಎಸ್‌ಸಿಪಿ- ಟಿಎಸ್‌ಪಿ ಹಣ ಪರಿಶಿಷ್ಟರಿಗೆ ವಿನಿಯೋಗವಾಗಲಿದೆ:
ಗ್ಯಾರಂಟಿ ಯೋಜನೆಗಳಿಗೆ ಎಸ್ ಸಿಪಿ ಟಿಎಸ್ ಪಿ ಅನುದಾನ ಬಳಸಿರುವುದಕ್ಕೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ನೋಟೀಸ್ ಜಾರಿ ಮಾಡಿರುವ ಬಗ್ಗೆ ಕೇಳಿದಾಗ, “ಇಡೀ ದೇಶದಲ್ಲಿ ಆಂಧ್ರ ಪ್ರದೇಶದ ನಂತರ ಕರ್ನಾಟಕದಲ್ಲಿ ನಾವು ಪರಿಶಿಷ್ಟರ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನ ನೀಡಿ ಬಳಸಲು ಕಾಯ್ದೆ ತಂದಿದ್ದೇವೆ. ರಾಷ್ಟ್ರೀಯ ಆಯೋಗ ನೊಟೀಸ್ ಜಾರಿ ಮಾಡುವುದೇ ಆದರೆ ಅದು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಈ ಅನುದಾನವನ್ನು ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಅವರಿಗೆ ವಿನಿಯೋಗಿಸುತ್ತಿದೆ. ಇದಕ್ಕೆ ನೊಟೀಸ್ ನೀಡಿರುವ ರಾಷ್ಟ್ರೀಯ ಆಯೋಗಕ್ಕೆ ನಾಚಿಕೆಯಾಗಬೇಕು. ಎಸ್ ಸಿಪಿ, ಟಿಎಸ್ ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದರು.