ಬೆಂಗಳೂರು: ವಿಧಾನ ಮಂಡಲ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಚಿವ ಸಂಪುಟದ ಅನುಮೋದಿಸಿದ್ದ ಭಾಷಣವನ್ನು ಓದಲಿಲ್ಲ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ರಾಜ್ಯಪಾಲರ ನಿಲುವು ಖಂಡಿಸಿ ಸದನದಲ್ಲೇ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಶಾಸಕರ ವರ್ತನೆಯನ್ನು ಬಿಜೆಪಿ ನಾಯಕರು ಗೂಂಡಾಗಿರಿ ಎಂದು ಬಣ್ಣಿಸಿದ್ದಾರೆ.
ಈ ನಡುವೆ, ರಾಜ್ಯಪಾಲರು ಓದದ ಭಾಷಣದ ಅಂಶಗಳನ್ನು ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಸರ್ಕಾರವು ಅಭಿವೃದ್ಧಿ, ಸಾಮಾಜಿಕ ನ್ಯಾಯ, ಹಣಕಾಸಿನ ಶಿಸ್ತು, ಪ್ರಾದೇಶಿಕ ನ್ಯಾಯ, ಜನಸ್ನೇಹಿ ಆಡಳಿತ, ಕಾನೂನು ಸುವ್ಯವಸ್ಥೆ ಮುಂತಾದವುಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡುತ್ತಿದೆ. ಪರಿಣಾಮಕಾರಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಹಾಗೂ ಇಂಡಿಯಾ ಜಸ್ಟೀಸ್ -2025 ರ… pic.twitter.com/8GNlxlQzfe
— Siddaramaiah (@siddaramaiah) January 22, 2026
ಸಿಎಂ ಹಂಚಿಕೊಂಡಿರುವ ಲಿಖಿತ ಭಾಷಣದ ಹೈಲೈಟ್ಸ್:
-
‘ನನ್ನ ಸರ್ಕಾರವು ಅಭಿವೃದ್ಧಿ, ಸಾಮಾಜಿಕ ನ್ಯಾಯ, ಹಣಕಾಸಿನ ಶಿಸ್ತು, ಪ್ರಾದೇಶಿಕ ನ್ಯಾಯ, ಜನಸ್ನೇಹಿ ಆಡಳಿತ, ಕಾನೂನು ಸುವ್ಯವಸ್ಥೆ ಮುಂತಾದವುಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡುತ್ತಿದೆ. ಪರಿಣಾಮಕಾರಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಹಾಗೂ ಇಂಡಿಯಾ ಜಸ್ಟೀಸ್ -2025 ರ ವರದಿ ಪ್ರಕಾರ ಪೊಲೀಸ್ ಮತ್ತು ನ್ಯಾಯದಾನ ವ್ಯವಸ್ಥೆ ರೂಪಿಸಿರುವ ದೇಶದ ಮಧ್ಯಮ ಮತ್ತು ದೊಡ್ಡ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ.
-
ಸಾಮಾಜಿಕ ಆರ್ಥಿಕ ಅಭಿವೃದ್ಧಿ, ಜನಸ್ನೇಹಿ ಕಾನೂನುಗಳ ರಚನೆ, ಕೈಗಾರಿಕಾ ಪರವಾದ ನೀತಿಗಳ ರಚನೆ ಮತ್ತು ಅನುಷ್ಠಾನ, ಸುಸಂಬದ್ಧವಾದ ಸಾರಿಗೆ ವ್ಯವಸ್ಥೆ, ಸರ್ಕಾರದ ಅಧೀನದ ಸಂಸ್ಥೆಗಳ ಕಾರ್ಯವೈಖರಿ, ಪೊಲೀಸು, ನ್ಯಾಯ ವ್ಯವಸ್ಥೆ ಮುಂತಾದವುಗಳಲ್ಲಿ ಕರ್ನಾಟಕವು ಇಂದು ದೇಶದಲ್ಲಿ ಹಲವು ಮಾದರಿಗಳನ್ನು ಸೃಷ್ಟಿಸಿದೆ.
-
ರಾಜ್ಯವು ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಮತ್ತು ನೀತಿಕಾರಕ ವಿಚಾರಗಳಲ್ಲಿ ದಮನಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತೆರಿಗೆ ಪಾಲು, ಕೇಂದ್ರ ಪುರಸ್ಕೃತ ಯೋಜನೆಗಳು, ಕೇಂದ್ರದ ಯೋಜನೆಗಳು, ವಿಶೇಷ ಯೋಜನೆಗಳು ಮುಂತಾದವುಗಳಲ್ಲಿ ಅನ್ಯಾಯಗಳಿಗೆ ತುತ್ತಾಗಿದೆ.
-
ದೇಶದ ಆರ್ಥಿಕತೆಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕವನ್ನು ಆರ್ಥಿಕವಾಗಿ ಗಮನಿಸಿದರೆ ಅದರ ಪರಿಣಾಮ ಇಡೀ ದೇಶದ ಮೇಲೆ ಉಂಟಾಗುತ್ತದೆ ಎಂಬುದನ್ನು ಒಕ್ಕೂಟ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆ. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಸುಮಾರು 1.25 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಸಂಪನ್ಮೂಲಗಳು ರಾಜ್ಯಕ್ಕೆ ಸಿಗದೆ ವಂಚನೆಯಾಗಿದೆ ಎಂಬುದನ್ನು 16ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಈ ಅನ್ಯಾಯವು ಸರಿಯಾಗಬಹುದೆಂಬುದು ಸರ್ಕಾರದ ಖಚಿತ ನಂಬುಗೆಯಾಗಿದೆ’.


























































