ಬೆಂಗಳೂರು: ರಾಜ್ಯದ ಕಾಂಗ್ರೆಸ್ ಪಕ್ಷವು ಒಂದು ರೀತಿ ರೌಡಿ ಪಾರ್ಟಿಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಎನ್.ರವಿಕುಮಾರ್ ಬಣ್ಣಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಂಥ ಒಂದು ಸುಸಂಸ್ಕøತ ರಾಜ್ಯಕ್ಕೆ ರಾಹುಲ್ ಗಾಂಧಿ ಅವರು ರೌಡಿ ಕೋತ್ವಾಲ್ ರಾಮಚಂದ್ರನ ಶಿಷ್ಯನಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ದುರಂತದ ಸಂಗತಿ ಎಂದರು.
ಕಾಂಗ್ರೆಸ್ ಯುವ ಘಟಕದ ಯುವತಿಯೊಬ್ಬರು ತಮ್ಮ ಮೇಲೆ ಯುವ ಕಾಂಗ್ರೆಸ್ ಮುಖಂಡ ನಲಪಾಡ್ ಅವರ ಗುಂಪಿನಿಂದ ಹಲ್ಲೆ ಆಗಿದೆ ಎಂದು ದೂರಿದ್ದನ್ನು ಜನರು ಮರೆತಿಲ್ಲ. ನಿನ್ನೆ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯಲ್ಲಿ ಯುವಕನೊಬ್ಬ ಡಿ.ಕೆ.ಶಿವಕುಮಾರ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಅವರಿಗೆ ಕಪಾಳಮೋಕ್ಷ ಮಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಡಿಕೆಶಿ ಅವರು ತಮ್ಮ ಸಿಟ್ಟನ್ನು ಸಿದ್ದರಾಮಯ್ಯ ಅವರ ಬದಲಾಗಿ ಯುವಕನ ಮೇಲೆ ತೀರಿಸಿಕೊಂಡರೇ ಎಂದು ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಮೇಲಿನ ಸಿಟ್ಟು, ಸೆಡವು, ಆಕ್ರೋಶವನ್ನು ಯುವಕನ ಮೇಲೆ ತೀರಿಸಿಕೊಂಡ ಬಗ್ಗೆ ರಾಹುಲ್ ಗಾಂಧಿ ಅವರು ವರದಿ ತರಿಸಿಕೊಂಡು ಕ್ರಮಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ ಅವರು ನಲಪಾಡ್ ರಕ್ಷಕರಾಗಿದ್ದಾರೆ. ನಲಪಾಡ್ ಅದೆಷ್ಟು ಹಲ್ಲೆ ಮಾಡಿದ್ದಾರೆ, ದೌರ್ಜನ್ಯ ನಡೆಸಿದ್ದಾರೆ ಎಂಬ ಬಗ್ಗೆ ರಾಹುಲ್ ಗಾಂಧಿ ಅವರು ವರದಿ ತರಿಸಿಕೊಳ್ಳಬೇಕು. ಡಿ.ಕೆ.ಶಿವಕುಮಾರ್ ಅವರು ಪಕ್ಷವನ್ನು ಕಟ್ಟುತ್ತಿದ್ದಾರೆಯೇ ಹಾಳು ಮಾಡುತ್ತಿದ್ದಾರೆಯೇ ಅಥವಾ ದೌರ್ಜನ್ಯ ನಡೆಸುವವರ ಪರ ಇದ್ದಾರೆಯೇ ಎಂಬ ಬಗ್ಗೆ ತಾಜಾ ವರದಿಯನ್ನು ತರಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ, ಅವರ ಪರ ಇರುವವರನ್ನು ಎದುರು ಹಾಕಿಕೊಳ್ಳುವ ಪ್ರವೃತ್ತಿಯನ್ನು ಡಿಕೆಶಿ ಅವರು ಮುಂದುವರಿಸಿದ್ದಾರೆ. ರಾಜ್ಯದ ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗೆ ಒಂದು ವರ್ಷ ಬೇಕಾಗುವ ಸ್ಥಿತಿ ಕಾಂಗ್ರೆಸ್‍ಗೆ ಬಂದಿದೆ. ಪಕ್ಷದೊಳಗೆ ಗುಂಪುಗಾರಿಕೆ- ದೌರ್ಜನ್ಯ ನಡೆಯುತ್ತಿವೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ನೆರವಾಗುವುದನ್ನು ಬಿಟ್ಟು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮೇಲಾಟ ಎಷ್ಟು ಸರಿ ಎಂದು ರವಿಕುಮಾರ್ ಅವರು ಪ್ರಶ್ನಿಸಿದರು. ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದ್ದು “ಗುಬ್ಬಿ ಮೇಲಿನ ಬ್ರಹ್ಮಾಸ್ತ್ರ” ಎಂದು ಅವರು ತಿಳಿಸಿದರಲ್ಲದೆ, ಈ ಕುರಿತು ರಾಹುಲ್ ಗಾಂಧಿ ಅವರು ಮಾಹಿತಿ ಪಡೆಯಲಿ ಎಂದರು.
ಡಿಕೆಶಿ ಅವರ ಕೋತ್ವಾಲ್ ಶಿಷ್ಯನ ಸಂಸ್ಕೃತಿಯ ಅನಾವರಣ ಆಗಿದೆ. ಇದು ಸರಿಯಲ್ಲ. ರಾಹುಲ್ ಗಾಂಧಿ ಅವರು ಆದಷ್ಟು ಬೇಗನೆ ಕ್ರಮ ಕೈಗೊಳ್ಳಲಿ ಎಂದು ಅವರು ಆಶಿಸಿದರು.