ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ವಿವಿಧೆಡೆ ಪ್ರತ್ಯೇಕ ಘಟನೆಗಳಲ್ಲಿ 7 ಮಂದಿ ಸಾವನ್ನಪ್ಪಿದ್ದಾತೆ. ಬಹುತೇಕ ಮಂದಿ ಮತದಾನ ಮಾಡಿದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆದಿದೆ. ದೇಶದಲ್ಲಿ ಎರಡನೇ ಹಂತದ ಮತದಾನವಾಗಿದ್ದರೂ ಕರ್ನಾಟಕದಲ್ಲಿ ಇದು ಆರಂಭದ ಹಂತದ ಮತದಾನ. ಈ ಸಂದರ್ಭದಲ್ಲಿ ಹೃದಯಾಘಾತ, ವಯೋಸಹಜ ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
-
ದೊಡ್ಡಬಳ್ಳಾಪುರದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ 35 ವರ್ಷದ ಕವಿತಾ ಎಂಬವರು ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
-
ಚಿತ್ರದುರ್ಗ ಜಿಲ್ಲೆ ಹೊಟ್ಟೆಪ್ಪನ ಹಳ್ಳಿ ಸಮೀಪದ ಮತಗಟ್ಟೆಯಲ್ಲಿ ಚುನಾವಣ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ 58 ವರ್ಷದ ಯಶೋದಮ್ಮ ಎಂಬವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
-
ಮೈಸೂರು ಜಿಲ್ಲೆ ತಿಪ್ಪೂರಿನಲ್ಲಿ 90 ವರ್ಷದ ಪುಟ್ಟಮ್ಮ ಎಂಬವರು ಮತದಾನ ಮಾಡಿದ ಸ್ವಲ್ಪ ಹೊತ್ತಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
-
ಕೊಡಗು ಜಿಲ್ಲೆ ಕೊಂಗಣ ಗ್ರಾಮದ ನಿವಾಸಿ 58 ವರ್ಷದ ಪದಾರ್ಥಿ ಮನೋಹರ್ ಎಂಬವರು ಮತದಾನ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
-
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಸಮೀಪದ ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ಶತಾಯುಷಿ, 103 ವರ್ಷ ಹರೆಯದ ಸತ್ತೇಗೌಡ ದೊಡ್ಡೇಗೌಡ ಎಂಬವರು ಮತದಾನ ಮಾಡಿ ಮರಳಿದ ಸ್ವಲ್ಪ ಹೊತ್ತಿನಲ್ಲೇ ಕೊನೆಯುಸಿರೆಳೆದಿದ್ದಾರೆ.
-
ಮಂಡ್ಯ ಜಿಲ್ಲೆ ಎಚ್.ಕೆ.ವಿ. ನಗರದ ನಿವಾಸಿ 92 ವರ್ಷ ಹರೆಯದ ಕುಂದೂರಯ್ಯ ಎಂಬವರು ಮತ ಚಲಾಯಿಸಿದ ನಂತರ ವಿಧಿವಶರಾಗಿದ್ದಾರೆ. ತುಮಕೂರಿನ ಎಸ್.ಎಸ್.ಪುರಂನಲ್ಲಿರುವ ಬಟ್ಟೆ ವ್ಯಾಪಾರಿ 54 ವರ್ಚದ ರಮೇಶ್ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.