ಬಾಗಲಕೋಟೆ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ತಮ್ಮ ಅಧಿಕಾರವನ್ನು ಸ್ವಂತಕ್ಕೋಸ್ಕರ, ಸ್ವಾರ್ಥಕ್ಕೋಸ್ಕರ ಮತ್ತು ರಾಜ್ಯದ ಜನರಿಗೆ ವಂಚನೆ ಮಾಡುವ ಕೆಲಸ ಮಾಡಿ, ಈ ರಾಜ್ಯವನ್ನು ಕತ್ತಲೆ ಕೋಣೆಯಲ್ಲಿಡುವ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರು ನಗರದ ಅಭಿವೃದ್ಧಿಯಲ್ಲಿ ನಮ್ಮದೇ ಆದ ಪಾಲುದಾರಿಕೆಯನ್ನು ಕೊಟ್ಟಿದ್ದೇವೆ ಎಂದು ತಿಳಿಸಿದರು. ಯಾವುದೇ ಶಾಸಕರೂ ತನ್ನ ಕಾರ್ಯಕ್ಷೇತ್ರಕ್ಕೆ ಹೋಗಿ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ; ನನ್ನಿಂದ ಇಷ್ಟು ಕೆಲಸ ಆಗಿದೆ ಎಂದು ಹೇಳುವ ನೈತಿಕತೆಯನ್ನು ಕೇವಲ ವಿಪಕ್ಷದವರಷ್ಟೇ ಅಲ್ಲ; ಆಡಳಿತ ಪಕ್ಷದವರೂ ಕಳಕೊಂಡಿದ್ದಾರೆ ಎಂದು ನುಡಿದರು.
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಿತಿಮೀರಿದೆ. ಅವ್ಯವಸ್ಥೆಯ ಆಗರವಾಗಿದೆ. ತಮ್ಮವರೇ ನಿಂದಿಸಿದರೂ ಎಚ್ಚತ್ತುಕೊಳ್ಳದ ನಿರ್ಲಿಪ್ತ ಸರಕಾರ ಸಿದ್ದರಾಮಯ್ಯನವರದು ಎಂದು ಟೀಕಿಸಿದರು. ಮೂಲಭೂತ ಸೌಕರ್ಯದತ್ತ ಎಲ್ಲೂ ಗಮನ ಕೊಡದೇ ಇಡೀ ಸಚಿವಸಂಪುಟ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ ಎಂದು ದೂರಿದರು.
ಈ ಸರಕಾರದ ಮೊಂಡುತನ, ಭ್ರಷ್ಟಾಚಾರ, ನಡವಳಿಕೆಯನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಲು ಒಂದು ಅವಕಾಶವನ್ನು ದಿವಂಗತ ಮೇಟಿಯವರು ನಮಗೆ ಕಲ್ಪಿಸಿಕೊಟ್ಟಿದ್ದಾರೆ. ದಾವಣಗೆರೆಯಲ್ಲಿ, ಶಿವಶಂಕರಪ್ಪ ಅವರು ಕಲ್ಪಿಸಿಕೊಟ್ಟಿದ್ದಾರೆ. ವಿವಿಧ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿದರೂ ಅದಕ್ಕೆ ಸರಿಯಾಗಿ ಸ್ಪಂದಿಸದೇ ಇಡೀ ರಾಜ್ಯದಲ್ಲಿ ಮೂರು ವರ್ಷದಲ್ಲಿ 2809 ಜನ ರೈತರು ಸಾವನ್ನಪ್ಪಿದ್ದಾರೆ. ಸುಮಾರು 2.5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಇವೆ. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ; ಇದೀಗ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ ಎಂದು ಗಮನ ಸೆಳೆದರು.
ಒಂದು ಸಮಾಜವನ್ನು ಇನ್ನೊಂದು ಸಮಾಜದ ಮೇಲೆ ಎತ್ತಿಕಟ್ಟುವ ಕ್ರಾಂತಿಕಾರಿ ಕಾರ್ಯ, ದೊಡ್ಡಸ್ಥಿಕೆಯನ್ನು ಈ ಸರಕಾರ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದೆ ಎಂದು ಟೀಕಿಸಿದರು. ಬಳಕೆ ಸರ್ಟಿಫಿಕೇಟ್ ನೀಡಿ ಹಣ ಪಡೆಯಬಹುದೆಂದು ಜಲಜೀವನ್ ಮಿಷನ್ನಡಿ 28 ಸಾವಿರ ಕೋಟಿಯನ್ನು ಠೇವಣಿ ಇಟ್ಟಿದ್ದೇವೆ. ಕೇವಲ 11 ಸಾವಿರ ಕೋಟಿಯನ್ನು ಇವರು ಪಡೆದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜೆಸಿಬಿ ಕೆಲಸ ಮಾಡಿ ಯಾವುದೋ ಹೆಸರಿನಲ್ಲಿ ಹಣ
ಅನವಶ್ಯಕವಾಗಿ ಟೀಕೆ ಮಾಡುವುದರಲ್ಲಿ ಇವರು ನಿಸ್ಸೀಮರು. ಜಿ ರಾಮ್ ಜಿ ವಿಚಾರಕ್ಕೆ ಬಂದರೆ 41 ಲಕ್ಷ ಬೋಗಸ್ ಕಾರ್ಡ್ ಇಟ್ಟುಕೊಂಡ ಜನ ನೀವು. ಜೆಸಿಬಿ ಕೆಲಸ ಮಾಡಿ ಯಾವುದೋ ಹೆಸರಿನಲ್ಲಿ ಹಣ ಪಡೆಯಲಾಗುತ್ತಿತ್ತು. ಪ್ರಧಾನಿಯವರು ದೇಶದ ಸರ್ವಾಂಗೀಣ ಅಭಿವೃದ್ಧಿ ಮತ್ತು ಹಳ್ಳಿಗಾಡಿನ ಜನರ ಜೀವನ ಮಟ್ಟ ಸುಧಾರಣೆಗಾಗಿ 88 ಸಾವಿರ ಕೋಟಿ ಬದಲಾಗಿ 97 ಸಾವಿರ ಕೋಟಿಯನ್ನು ಅದಕ್ಕಾಗಿ ಮೀಸಲಿಟ್ಟಿದ್ದಾರೆ. ಜಿ ರಾಮ್ ಜಿ ಎಂದು ಮಾಡಿ, ವಿಕಸಿತ ಭಾರತದ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಇದೊಂದು ಕೆಟ್ಟ- ನಿರ್ಲಿಪ್ತ ಸರಕಾರ. ರಾಜ್ಯದ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಅವರು ಆರೋಪಿಸಿದರು.























































