ಬೆಂಗಳೂರು: ರಾಜ್ಯದಲ್ಲಿ ನರ್ಸಿಂಗ್ ಕಾಲೇಜುಗಳ ಶುಲ್ಕ ನಿಯಂತ್ರಣಕ್ಕೆ ಪ್ರಾಧಿಕಾರ ರಚಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿ ಸೋಮವಾರ ತಮ್ಮ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ
ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಅಧಿಕ ಶುಲ್ಕ ವಸೂಲು ಮಾಡುತ್ತಿರುವ ಬಗ್ಗೆ ನಮ್ಮ ಕಚೇರಿಗೆ ಹಲವಾರು ದೂರುಗಳು ಸಲ್ಲಿಕೆಯಾಗಿವೆ. ಇದರಿಂದ ವಿದ್ಯಾರ್ಥಿಗಳ ಹಣಕಾಸಿನ ಹೊರೆಯನ್ನು ಹೊರಬೇಕಾಗಿದೆ. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ 5 ಜನ ಸದಸ್ಯರುಗಳ “ಶುಲ್ಕ ನಿಯಂತ್ರಣ ಪ್ರಾಧಿಕಾರವನ್ನು” ರಚಿಸಲಾಗುವುದು. ನರ್ಸಿಂಗ್ ಕಾಲೇಜುಗಳ ಶುಲ್ಕಗಳನ್ನ ಪರಿಶೀಲಿಸುವ ಕಾರ್ಯವನ್ನು ಈ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಸರಕಾರ ನಿಗದಿಪಡಿಸಿರುವ ಶುಲ್ಕಕ್ಕೂ ಹೆಚ್ಚು ಶುಲ್ಕವನ್ನು ವಸೂಲು ಮಾಡುತ್ತಿರುವ ಸಂಸ್ಥೆಗಳ ಎಸೆನ್ಶಿಯಲ್ ಸರ್ಟಿಫಿಕೇಟ್ ಹಾಗೂ ಫೀಸಿಬಲಿಟಿ ಸರ್ಟಿಫಿಕೇಟ್ ನ್ನ ರದ್ದುಗೊಳಿಸುವಂತೆಯೂ ಅಧಿಕಾರಿಗಳಿಗೆ ಡಾ. ಶರಣ ಪ್ರಕಾಶ್ ಪಾಟೀಲ್ ಸೂಚನೆ ನೀಡಿದರು.
ಪ್ರಸ್ತುತ ಸರಕಾರಿ ಕೋಟಾದ ಅಡಿಯಲ್ಲಿ ಭರ್ತಿಯಾಗುವ ವಿದ್ಯಾರ್ಥಿಗಳಿಗೆ 10,000. ಮ್ಯಾನೇಜ್ ಮೆಂಟ್ ಕೋಟಾದ ಅಡಿಯಲ್ಲಿ ಭರ್ತಿಯಾಗುವ ವಿದ್ಯಾರ್ಥಿಗಳಿಗೆ 1 ಲಕ್ಷ ಮತ್ತು ನಾನ್-ಕರ್ನಾಟಕ ವಿದ್ಯಾರ್ಥಿಗಳಿಗೆ 1.40 ಲಕ್ಷ ರೂಪಾಯಿಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ 611 ನರ್ಸಿಂಗ್ ಕಾಲೇಜುಗಳಿದ್ದು 35,000 ಸೀಟ್ ಗಳು ಲಭ್ಯವಿವೆ. ಅಲ್ಲದೇ, ಈ ಶುಲ್ಕವನ್ನು ಶೇಕಡಾ 20 ರಷ್ಟು ಹೆಚ್ಚಿಸುವಂತೆ ನರ್ಸಿಂಗ್ ಕಾಲೇಜುಗಳ ಆಡಳಿತ ಮಂಡಳಿಯ ಪ್ರತಿನೀಧಿಗಳು ಇತ್ತೀಚೆಗೆ ಮಾಡಿದ ಮನವಿಯನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ ತಿರಸ್ಕರಿಸಿದ್ದಾರೆ.
ಈ ಸಮಿತಿಯು ಬಿಎಸ್ಸಿ, ನರ್ಸಿಂಗ್ ಹಾಗೂ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಪ್ರೀ (ಜಿಎನ್‌ಎಂ) ಡಿಪ್ಲಮೋ ಪ್ರೋಗ್ರಾಂ ಗಳ ಶುಲ್ಕದ ಬಗ್ಗೆಯೂ ನಿಗಾವಹಿಸಲಿದೆ. ಹಾಗೆಯೇ, ಜಿಲ್ಲಾಧಿಕಾರಿಗಳ ಸಭೆಯನ್ನು ಆಯೋಜಿಸಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಜಿಎನ್‌ಎಂ ನರ್ಸಿಂಗ್ ಕಾಲೇಜುಗಳಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಒಂದು ತಿಂಗಳ ಒಳಗಾಗಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲು ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿಗಳಾದ ಮೊಹಮ್ಮದ್ ಮೋಶಿನ್ ಅವರಿಗೆ ಸೂಚನೆ ನೀಡಿದರು. ಬಿಎಸ್‌ಸಿ ನರ್ಸಿಂಗ್ ಕಾಲೇಜುಗಳಿಗೆ ಸಂಬಂಧಿಸಿದಂತೆ ಒಂದು ಪರಿಶೀಲನಾ ತಂಡವನ್ನು ರಚಿಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ. ಬಿ.ಎಲ್ ಸುಜಾತಾ ಅವರಿಗೆ ಸೂಚನೆ ನೀಡಿದರು.
ನರ್ಸಿಂಗ್ ಕಾಲೇಜುಗಳಲ್ಲಿ ಅಗತ್ಯ ಸೌಲಭ್ಯಗಳು, ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು, ಲ್ಯಾಬೋರೋಟರಿಗಳು, ಗ್ರಂಥಾಲಯಗಳು ಹಾಗೂ ಹೈಜೀನ್ ಸ್ಟಾಂರ್ಡ್‌ಡ್ ಇಲ್ಲದೇ ಇರುವ ಬಗ್ಗೆ ಹಲವು ದೂರುಗಳು ನಮ್ಮ ಕಚೇರಿಗೆ ಸಲ್ಲಿಕೆಯಾಗಿವೆ. ಹೆಚ್ಚು ಶುಲ್ಕವನ್ನು ತಗೆದುಕೊಳ್ಳುವುದರ ಹೊರತಾಗಿಯೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಸ್ಥೆಗಳು ವಿಫಲವಾಗಿವೆ. ಅಗತ್ಯ ಸೌಲಭ್ಯಗಳನ್ನು ಹೊಂದಿರದೇ ಇರುವ ನರ್ಸಿಂಗ್ ಕಾಲೇಜುಗಳ ಅನುಮತಿಯನ್ನ ಹಿಂದಕ್ಕೆ ಪಡೆಯಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಒಂದು ಕಟ್ಟಡ ಒಂದು ಸಂಸ್ಥೆ ನಿಯಮ:
ನರ್ಸಿಂಗ್ ಕಾಲೇಜುಗಳನ್ನು ನಡೆಸಲು ಅನುಮತಿ ಪಡೆದಿರುವ ಕಟ್ಟಡಗಳಲ್ಲಿ ನರ್ಸಿಂಗ್ ಕೋರ್ಸುಗಳನ್ನು ಮಾತ್ರ ನಡೆಸಬೇಕು. ಬೇರೆ ಯಾವುದೇ ಕೋರ್ಸುಗಳನ್ನು ನಡೆಸುತ್ತಿದ್ದರೆ ಅಂತಹ ಕಾಲೇಜುಗಳ ಅನುಮತಿಯನ್ನು ಹಿಂಪಡೆಯಬೇಕು ಎಂದು ಸೂಚನೆ ನೀಡಿದರು.