ಬೆಂಗಳೂರು: ರಾಜ್ಯದಲ್ಲಿರುವುದು 80% ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರು ಮೂರು ಬಾರಿ ಸುದ್ದಿಗೋಷ್ಠಿ ನಡೆಸಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿಜೆಪಿ ಸರ್ಕಾರವಿದ್ದರೂ 40 ಪರ್ಸೆಂಟ್ ಎಂದು ಆರೋಪ ಮಾಡಲಾಗಿತ್ತು. ಮಧ್ಯವರ್ತಿಗಳ ಹಾವಳಿ, ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟು ಕಮಿಶನ್, 80 ಪರ್ಸೆಂಟ್ ಕಮಿಶನ್ ಹೀಗೆ ಮೊದಲಾದ ಆರೋಪಗಳನ್ನು ಮಾಡಿದ್ದಾರೆ. ಅವರು ಮಾಡಿರುವ ಆರೋಪ ರಾಹುಲ್ ಗಾಂಧಿಯ ತನಕ ಹೋಗಿದೆ. ಆಂಧ್ರದವರಿಗೆ ಟೆಂಡರ್ ನೀಡಲಾಗಿದೆ, ಹಳೆ ಬಿಲ್‌ಗಳಿಗೆ ಹೆಚ್ಚಿನ ಕಮಿಶನ್ ಪಡೆಯಲಾಗುತ್ತಿದೆ, 37,370 ಕೋಟಿ ರೂ. ಬಾಕಿ ಇದೆ ಎಂದಿದ್ದರೂ ಸರ್ಕಾರ ಕ್ರಮ ವಹಿಸಿಲ್ಲ, ಮುಷ್ಕರ ಮಾಡದೇ ಬೇರೆ ದಾರಿಯಿಲ್ಲ ಎಂದು ಗುತ್ತಿಗೆದಾರರ ಸಂಘ ತಿಳಿಸಿದೆ. ನಗರಾಭಿವೃದ್ಧಿ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಘ ಪತ್ರ ಬರೆದಿದೆ. ಇಷ್ಟೆಲ್ಲ ಆಪಾದನೆಗಳು ಬಂದರೂ ಗುತ್ತಿಗೆದಾರರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದರೆ, ಸರ್ಕಾರ ತಪ್ಪು ಮಾಡಿದೆ ಎಂದೇ ಅರ್ಥ ಎಂದರು.
ಕಲ್ಯಾಣ ಕರ್ನಾಟಕ ಮಂಡಳಿಯ ವತಿಯಿಂದ ಮಾಡಬೇಕಿರುವ ಕಾಮಗಾರಿಗಳನ್ನು ಇನ್ನೂ ನಡೆಸಿಲ್ಲ. ಸರ್ಕಾರದಿಂದ 5,000 ಕೋಟಿ ರೂ. ನೀಡಿದ್ದರೂ ಕಾಮಗಾರಿ ಮಾಡಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಈ ಎಲ್ಲ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಹಿಂದಿನ ಬಿಜೆಪಿ ಬಾಕಿ ಇಟ್ಟುಕೊಂಡಿದೆ ಎಂದು ಹೇಳಿದ್ದಾರೆ. ಹಿಂದೆ 14,000 ಕೋಟಿ ರೂ. ಬಾಕಿ ಬಿಲ್ ಇರಿಸಿದ್ದಾಗ ಬಿಜೆಪಿ ಅದನ್ನು ಪಾವತಿಸಿತ್ತು. ಬಿಲ್ ಪಾವತಿಸುವುದು ನಿರಂತರ ಪ್ರಕ್ರಿಯೆ. 40 ಪರ್ಸೆಂಟ್ ಎಂಬ ಭಿತ್ತಿಪತ್ರಗಳನ್ನು ಕಾಂಗ್ರೆಸ್ ನಾಯಕರು ಎಲ್ಲ ಕಡೆ ಅಂಟಿಸಿದ್ದರು. ಈಗ ಈ ಆರೋಪದ ಪತ್ರಗಳನ್ನು ಜನರು ಕಾಂಗ್ರೆಸ್ ನಾಯಕರ ಮುಖದ ಮೇಲೆ ಅಂಟಿಸುತ್ತಾರೆ ಎಂದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿರುವಂತೆ, ಅವರು ನಿರ್ಗಮಿಸುವಾಗ 24,000 ಕೋಟಿ ರೂ. ಖಜಾನೆಯಲ್ಲಿ ಬಿಟ್ಟಿದ್ದಾರೆ. ಮೆಟ್ರೊದಲ್ಲಿ 2,000 ಕೋಟಿ ರೂ. ಹಣ ಇತ್ತು. ಆದರೆ ಕಾಂಗ್ರೆಸ್ ಬಂದ ನಂತರ ನಿರಂತರ ಭ್ರಷ್ಟಾಚಾರ ನಡೆದಿದೆ. ಮುಡಾದಲ್ಲಿ 3,000 ಕೋಟಿ ರೂ ಅಕ್ರಮ, ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಅಕ್ರಮ, ದಲಿತರ 43,000 ಕೋಟಿ ರೂ. ಅಕ್ರಮ ಬಳಕೆ, ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. 30 ವರ್ಷಕ್ಕಾಗಿ ಮಾಡುವ ಕಾಂಕ್ರೀಟ್ ರಸ್ತೆ ಉದ್ಘಾಟನೆಗೆ ಮುನ್ನವೇ ಕಿತ್ತುಹೋಗಿದೆ ಎಂದರು.
ಮಹಾತ್ಮ ಗಾಂಧೀಜಿಯವರನ್ನು ಬಳಸಿಕೊಂಡು ಕಾಂಗ್ರೆಸ್, ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಜಾಹೀರಾತು ಓಡಾಡುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಗುತ್ತಿಗೆದಾರ ಮುನೇಗೌಡ ಎಂಬುವರು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ಮುನ್ನ ತೆರಿಗೆ ಹಾಕಲ್ಲ ಎಂದು ಹೇಳಿ, ನಂತರ 56,000 ಕೋಟಿ ರೂ. ತೆರಿಗೆ ಹಾಕಿದ್ದಾರೆ. 40 ಪರ್ಸೆಂಟ್ ಕಮಿಶನ್‌ನಲ್ಲಿ ಉಳಿಸಿದ ಹಣದಿಂದ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ. ಬಜೆಟ್‌ನಲ್ಲಿ 40% ಎಂದರೆ 1.60 ಲಕ್ಷ ಕೋಟಿ ರೂ. ಆಗುತ್ತದೆ. ಎರಡೂ ಸೇರಿದರೆ 2 ಲಕ್ಷ ಕೋಟಿ ರೂ.ಗೂ ಹೆಚ್ಚಾಗುತ್ತದೆ. ಈ ಹಣ ಎಲ್ಲಿದೆ? ಗುತ್ತಿಗೆದಾರರು 80 ಪರ್ಸೆಂಟ್ ಕಮಿಶನ್ ಬಗ್ಗೆ ಹೇಳಿರುವಾಗ, ಅದು ಸುಳ್ಳಾಗಿದ್ದರೆ ಕ್ರಮ ಕೈಗೊಳ್ಳಬೇಕಿತ್ತು. ಗುತ್ತಿಗೆದಾರರು ಗುತ್ತಿಗೆ ಪಡೆಯುವಾಗಲೇ 12% ಕಮಿಶನ್ ಹಾಗೂ ಬಿಲ್ ಮಂಜೂರಾತಿಗೆ 7% ನೀಡಬೇಕಾಗುತ್ತದೆ ಎಂದರು.
ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಅಂದರೆ 7.64 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಕೆಂಗಲ್ ಹನುಮಂತಯ್ಯನವರಿಂದ ಆರಂಭವಾಗಿ ಈವರೆಗಿನ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ. ಹಣ ನೀಡುತ್ತೇವೆಂದು ಹೇಳಿ ಇನ್ನೂ ನೀಡಿಲ್ಲ. ಆರ್ಥಿಕ ಇಲಾಖೆ ಇನ್ನೂ ಹಣ ನೀಡಿಲ್ಲವೆಂದರೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಏನು ಮಾಡುತ್ತಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಅನ್ನಭಾಗ್ಯದ 657 ಕೋಟಿ ರೂ. ಮೊತ್ತ ಜನರಿಗೆ ಸಿಕ್ಕಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ನೀಡದೆ ಶಾಸಕರು ಪರದಾಡುತ್ತಿದ್ದಾರೆ, ಅಂಗನವಾಡಿ ಸಹಾಯಕರ ಗೌರವಧನ ನೀಡದೆ ಅವರು ಪರದಾಡುತ್ತಿದ್ದಾರೆ, ನೆರೆ ಪರಿಹಾರ ನೀಡದೆ ರೈತರು ಪರದಾಡುತ್ತಿದ್ದಾರೆ. ಆದರೆ ಸಚಿವರು ಹಣ ಮಾಡುವುದರಲ್ಲಿ ಕಿತ್ತಾಟ ಮಾಡುತ್ತಿದ್ದಾರೆ. ಇದು ಇಲ್ಲಗಳ ಸರ್ಕಾರ. ಸರ್ಕಾರದ ಖಜಾನೆಯಲ್ಲಿ ಹೆಗ್ಗಣಗಳ ಕಾಟದಿಂದ ಯಾವ ಹಣವನ್ನೂ ನೀಡಲು ಆಗುತ್ತಿಲ್ಲ. ಸರ್ಕಾರದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಧಾರವಾಡದಲ್ಲಿ 10 ಸಾವಿರ ಅಭ್ಯರ್ಥಿಗಳು ಹೋರಾಟ ಮಾಡುತ್ತಿದ್ದಾರೆ ಎಂದರು.
























































