ಬೆಂಗಳೂರು: ಮತಾಂತರ ನಿಷೇಧ ಕಾಯಿದೆ ಯಾವ ಧರ್ಮದ ವಿರುದ್ಧ ರೂಪಿತವಾಗಿಲ್ಲಾ ಆದರೆ ಯಾವುದೇ ರೀತಿಯ ಆಮಿಷ ಅಥವಾ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಸಚಿವರು, ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾದ ಮತಾಂತರ ನಿಷೇಧ (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಸಭೆಯಿಂದ ಅಂಗೀಕಾರ ಪಡೆಯಲಾಗಿದೆ. ಮೇಲ್ಮನೆಯಲ್ಲಿ ಮಂಡಿತವಾಗಿರುವ ಮಸೂದೆಗೆ ಮುಂದಿನ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದ ಸಚಿವರು, ಪ್ರಸಕ್ತ ಸರಕಾರವು ಹೊರಡಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಮ್ಮತಿ ನಿರೀಕ್ಷಿಸಿದ್ದೇವೇ ಎಂದರು. ಸುಗ್ರೀವಾಜ್ಞೆಯನ್ನು ಬಲವಾಗಿ ಸಮರ್ಥಿಸಿದ ಸಚಿವರು, ಸಮಾಜದಲ್ಲಿ ಶಾಂತಿ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ, ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಕ್ರೈಸ್ತ ಧಾರ್ಮಿಕ ಮುಖಂಡರು, ರಾಜ್ಯಪಾಲರನ್ನು ಭೇಟಿಯಾಗಿ ಮತಾಂತರ ಮಸೂದೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸಂವಿದಾನ ದತ್ತವಾಗಿ ಇರುವ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ಪ್ರಸ್ಥಾವವೂ ತಿದ್ದುಪಡಿ ಮಸೂದೆಯಲ್ಲಿ ಇಲ್ಲ ಎಂದರು.
ತಿದ್ದುಪಡಿ ಮಸೂದೆ ಬಗ್ಗೆ, ಸದನದಲ್ಲಿ ವಿವರವಾಗಿ ಚರ್ಚಿಸಲಾಗಿದೆ, ಶಾಸಕರೊಬ್ಬರು ಮತಾಂತರ ಹಾವಳಿ ಸೃಷ್ಟಿಸಿದ ಕುಟುಂಬಗಳ ನಡುವಿನ ಘರ್ಷಣೆಗಳ ಕುರಿತೂ ಪ್ರಸ್ತಾಪಿಸಿದ್ದನ್ನೂ ನೆನಪಿಸಿದ ಸಚಿವರು, ಸುಗ್ರೀವಾಜ್ಞೆಗೆ ಸಮ್ಮತಿ ಸಿಕ್ಕಿದ ನಂತರ, ಕಾನೂನನ್ನು ಪರಿಣಾಮಕಾರಿ ಯಾಗಿ ಜಾರಿಗೆ ತರಲಾಗುವುದು, ಎಂದರು.
ಈ ಹಿಂದೆ, ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯಿದೆ ತಂದಿದ್ದನ್ನು ನೆನಪಿಸಿದ ಸಚಿವರು “ನಮ್ಮ ಸರಕಾರ ಆ ವಿಧೇಯಕ ವನ್ನು ಮತ್ತಷ್ಟು ಬಲಗೊಳಿಸಿದ್ದಲ್ಲದೆ ಕಟ್ಟು ನಿಟ್ಟಾಗಿ ಜಾರಿಗೆ ತರಲು ಬದ್ಧವಾಗಿದೆ” ಎಂದರು.