ಬೆಂಗಳೂರು: ಮೇಕೆದಾಟು ವಿಷಯದಲ್ಲಿ ಸೋಮವಾರದಂದು ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಂಡಿರುವ ನಿರ್ಣಯಕ್ಕೂ ಮತ್ತು ರಾಜ್ಯಕ್ಕೂ ಸಂಬಂಧ ಇಲ್ಲ. ರಾಜ್ಯ ಸರಕಾರ ಈ ಯೋಜನೆ ವಿಷಯದಲ್ಲಿ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಲಹೆ ಮಾಡಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿನ್ನೆ ವಿಧಾನಸಭೆಯಲ್ಲಿ ತಮಿಳುನಾಡಿನ ಎಲ್ಲಾ ಪಕ್ಷಗಳು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು ಎಂದು ನಿರ್ಣಯ ಮಾಡಿದ್ದಾರೆ. ಅಕ್ಕಪಕ್ಕದ ರಾಜ್ಯಗಳ ಮೇಲೆ, ಅದರಲ್ಲೂ ಕರ್ನಾಟಕದ ಮೇಲೆ ತಮಿಳುನಾಡು ಸರ್ಕಾರ ಒತ್ತಡ ಹೇರುವಂತದ್ದು ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರನ್ನು ಕುಡಿಯುವ ಹಕ್ಕಿದೆ. ಅವರ ನೀರನ್ನು ಕೊಡದಿದ್ದಾಗ ಅವರು ಕೇಳಬೇಕು. ನಮ್ಮ ಭಾಗದಲ್ಲಿ ಜಲಾಶಯ ಕಟ್ಟಲು ತಕರಾರು ಇಲ್ಲ ಎಂದು ತಮಿಳುನಾಡು ವಕೀಲರೇ ಸುಪ್ರೀಂ ಕೋರ್ಟಿನಲ್ಲಿ ಹೇಳಿದ್ದಾರೆ. ಈಗ ನೋಡಿದರೆ ಹೊಸ ವರಸೆ ಶುರು ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು
ಮೇಕೆದಾಟು ಯೋಜನೆಯನ್ನು ವಿರೋಧ ಮಾಡುವ ಯಾವುದೇ ಹಕ್ಕು ತಮಿಳುನಾಡಿಗೆ ಇಲ್ಲ. ನಮಗೆ ಪರಿಸರ ವಿಷಯದಲ್ಲಿ ಮಾತ್ರ ಒಪ್ಪಿಗೆ ಬಾಕಿ ಇದೆ. ತಮಿಳುನಾಡಿನ ನಾಯಕರು ವಿಧಾನಸಭೆಯಲ್ಲಿ ಮಾಡಿಕೊಂಡಿರುವ ನಿರ್ಣಯಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧ ಇಲ್ಲ. ಸರ್ಕಾರ ಬದ್ದತೆ ತೋರಿಸಬೇಕು. ಎಲ್ಲವೂ ಸರ್ಕಾರದ ಕೈಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಕಾವೇರಿಯಲ್ಲಿ ನಮ್ಮ ನೀರನ್ನು ಪಡೆಯುವುದರಲ್ಲಿ ಅನ್ಯಾಯ ಆಗಿದೆ ಅದನ್ನು ಸರ್ಕಾರ ತ್ವರಿತಗತಿಯಲ್ಲಿ ಸರಿಪಡಿಸಬೇಕು. ಮುಂಗಡ ಪತ್ರದಲ್ಲಿ 1000 ಕೋಟಿ ಇಟ್ಟರೆ ಸಾಲದು, ಕೆಲಸ ಆರಂಭ ಆಗಬೇಕು. ಅಲ್ಲದೆ, ಕಾವೇರಿ ವ್ಯಾಪ್ತಿಯಲ್ಲಿ ತಮಿಳುನಾಡು ಸರ್ಕಾರ ಕೆಲ ಯೋಜನೆಯನ್ನು ನಡೆಸುತ್ತಿದೆ. ಅವರು ಏನು ಚಟುವಟಿಕೆ ಮಾಡುತ್ತಿದ್ದಾರೆ. ಕರ್ನಾಟಕ ಎಂದೂ ತೊಂದರೆ ಮಾಡಿಲ್ಲ.ಹೀಗಾಗಿ ಅವರ ಚಟುವಟಿಕೆ ನಡೆಯುತ್ತಲೆ ಇದೆ. ಇದೇ ರೀತಿ ಮುಂದುವರೆದರೆ 9 ಸಾವಿರ ಕೋಟಿ ಡಿಪಿಆರ್ ಎಲ್ಲಿಗೆ ಹೋಗುತ್ತದೆ ಎಂದು ಅವರು ಪ್ರಶ್ನಿಸಿದರು.
ಮೇಕೆದಾಟು ಯೋಜನೆಯನ್ನು ಯಾವ ರೀತಿ ಕಾರ್ಯಗತ ಮಾಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಎರಡು ಹಂತಗಳಲ್ಲಿ ಕಾರ್ಯಗತ ಮಾಡಿ ಎಂದು ಅವರು ಹೇಳಿದ್ದಾರೆ. ನಾನು ಕೂಡ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಜತೆಗೆ, ಮುಖ್ಯಮಂತ್ರಿಗಳು ಸರ್ವಪಕ್ಷ ನಾಯಕರನ್ನು ದೆಹಲಿಗೆ ಕರೆದೊಯ್ಯುವ ವಿಚಾರವನ್ನು ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ. ಮೊದಲು ಸೋಮವಾರ ಗೋವಿಂದ ಕಾರಜೋಳ ದೆಹಲಿಗೆ ಹೋಗಿದ್ದಾರೆ. ನಂತರ ಸಂಸದರ ನಿಯೋಗ ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕಾದು ನೋಡೋಣ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.