ಬೆಂಗಳೂರು: ‘ಬೆಂಗಳೂರು ಮೆಟ್ರೋ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ನಮ್ಮ ನಗರದ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಕನಸುಗಳನ್ನು ಹೊತ್ತೊಯ್ಯುವ, ಪ್ರಗತಿಯತ್ತ ಮುನ್ನಡೆಸುವ ಮತ್ತು ಈ ಎಲ್ಲರ ದೈನಂದಿನ ಜೀವನಾಡಿಯ ಸಂಕೇತವಾಗಿದೆ. ಇತ್ತೀಚಿನ ಮೆಟ್ರೋ ದರ ಪರಿಷ್ಕರಣೆಯ ನಂತರ ಪ್ರಯಾಣಿಕರಿಂದ ವ್ಯಕ್ತವಾದ ಆತಂಕ ಮತ್ತು ಬೇಸರವನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ಜನರ ಅಹವಾಲಿಗೆ ಕಿವಿಯಾಗಬೇಕಿರುವುದು ಪ್ರತಿ ಜವಾಬ್ದಾರಿಯುತ ಸರ್ಕಾರದ ಕರ್ತವ್ಯ ಎಂದು ನಂಬಿರುವ ನಮಗೆ ನಿಮ್ಮ ಅಹವಾಲುಗಳೇ ಆದ್ಯತೆಯಾಗಿವೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೆಟ್ರೋ ರೈಲು ಟಿಕೆಟ್ ದರ ಏರಿಕೆ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮ X ನಲ್ಲಿ ಸಿಎಂ ಹಾಕಿರುವ ಪೋಸ್ಟ್ ಗಮನಸೆಳೆದಿದೆ.
ಮೆಟ್ರೋ ರೈಲ್ವೇಸ್ (ಆಪರೇಷನ್ & ಮೇಂಟೆನೆನ್ಸ್) ಆಕ್ಟ್, 2002ರ ಅಡಿಯಲ್ಲಿ, ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ದರಗಳನ್ನು ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಮೂಲಕ ರಚಿಸಲಾದ ಸ್ವತಂತ್ರ ದರ ನಿಗದಿ ಕಮಿಟಿ (FFC) ನಿರ್ಧರಿಸುತ್ತದೆ.
ಆಕ್ಟ್‌ನ ಸೆಕ್ಷನ್ 36ರ ಪ್ರಕಾರ, ದರ ನಿಗದಿ ಕಮಿಟಿಯು ನಿಗದಿತ ಅವಧಿಯೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕು, ಮತ್ತು ಸೆಕ್ಷನ್ 37ರ ಅಡಿಯಲ್ಲಿ ಈ ಶಿಫಾರಸುಗಳು ಮೆಟ್ರೋ ಆಡಳಿತವು ಒಪ್ಪಲೇಬೇಕಿದೆ ಮತ್ತು ಜಾರಿ ಮಾಡಬೇಕಿದೆ. ರಾಜ್ಯ ಸರ್ಕಾರಕ್ಕೆ ಅಥವಾ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಈ ಶಿಫಾರಸುಗಳನ್ನು ರದ್ದುಗೊಳಿಸುವ ಅಥವಾ ಉಲ್ಲಂಘಿಸುವ ಕಾನೂನಾತ್ಮಕ ಅಧಿಕಾರವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಈ ದರ ನಿಗದಿ ಕಮಿಟಿಯನ್ನುಕೇಂದ್ರ ಸರ್ಕಾರವೇ ರಚಿಸುತ್ತದೆ. ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯವರು ಕಮಿಟಿಯ ನೇತೃತ್ವ ವಹಿಸಿರುತ್ತಾರೆ. ಕೇಂದ್ರದ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಮತ್ತು ಸಂಸತ್ತಿನಲ್ಲಿ ತಾವೇ ಈ ಶಿಫಾರಸುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಿ ಈಗ ನಮ್ಮ ಸರ್ಕಾರದ ಮೇಲೆ ಬೆಲೆಯೇರಿಕೆ ನಿರ್ಧಾರದ ಆರೋಪ ಹೊರಿಸುವುದು ಅಪ್ರಾಮಾಣಿಕ ನಡೆ ಮಾತ್ರವಲ್ಲ, ಜನರನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ ಎಂದು ಸಿಎಂ ಗಮನಸೆಳೆದಿದ್ದಾರೆ.
ದರ ನಿಗದಿ ಕಮಿಟಿಯು ಶಿಫಾರಸು ಮಾಡಿರುವ ದರವನ್ನು ಮರುಪರಿಶೀಲಿಸಬೇಕು. ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಬಡಜನರಿಗೆ ಅನುಕೂಲವಾಗುವಂತೆ ಸಮಾನವಾಗಿ ದರ ನಿಗದಿ ಮಾಡುವ ವ್ಯವಸ್ಥೆಯನ್ನು ಅನುಸರಿಸಬೇಕು. ಸಾಮಾಜಿಕ ನ್ಯಾಯದೊಂದಿಗೆ ಸುಸ್ಥಿರ ಆರ್ಥಿಕತೆಯನ್ನು ಸರಿದೂಗಿಸುವ ನೀತಿಗಳ ಬಗ್ಗೆ ಗಮನ ಹರಿಸಬೇಕು ಎಂದು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದು, ಕೇಂದ್ರದ ಮುಂದೆ ಬೇಡಿಕೆ ಇಡುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರಗಳ ಸಂಪರ್ಕ ಹಾಗೂ ಸಾರಿಗೆ, ಸಾರ್ವಜನಿಕ ಸೇವೆಗಳು ಮತ್ತು ಜನರ ಹಿತವನ್ನು ರಕ್ಷಿಸುವಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿ ರಾಜ್ಯವಾಗಿದೆ. ನಾವು ಬೆಂಗಳೂರು ನಗರ ನಿವಾಸಿಗಳ ಹಿತರಕ್ಷಣೆಗಾಗಿ ಸಂವಿಧಾನಾತ್ಮಕವಾಗಿ, ರಚನಾತ್ಮಕವಾಗಿ ಮತ್ತು ದೃಢವಾಗಿ ನಿಲ್ಲಲಿದ್ದೇವೆ ಎಂದವರು ಭರವಸೆ ನೀಡಿದ್ದಾರೆ.
ವಿರೋಧ ಪಕ್ಷಗಳು ಹರಡುತ್ತಿರುವ ತಪ್ಪು ಮಾಹಿತಿಯನ್ನು ಬದಿಗೊತ್ತಿ ರಾಜ್ಯದ ಜನತೆಯ ಹಿತಕ್ಕಾಗಿ ನೀವೆಲ್ಲರೂ ನಮ್ಮ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿರುವ ಸಿಎಂ, ದೆಹಲಿಯಲ್ಲಿ ಕರ್ನಾಟಕದ ಹಿತ ಕಾಪಾಡಲು ವಿಫಲರಾಗಿರುವ ಬಿಜೆಪಿ ನಾಯಕರೇ ಇಂದು ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಟೀಕಿಸುವ ಮೂಲಕ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕರ್ನಾಟಕದ ಬಿಜೆಪಿ ಸಂಸದರು ಈ ವಿಷಯವನ್ನು ಸಂಸತ್ತಿನಲ್ಲಿ ಏಕೆ ಪ್ರಶ್ನಿಸಲಿಲ್ಲ? ಕರ್ನಾಟಕದ ಬಿಜೆಪಿ ಸಚಿವರು ಕೇಂದ್ರ ಮಟ್ಟದಲ್ಲಿ ಉನ್ನತ ದರದ ಸ್ಲ್ಯಾಬ್‌ಗಳನ್ನು ಏಕೆ ವಿರೋಧಿಸಲಿಲ್ಲ? ಬೆಂಗಳೂರಿಗರ ಬೆಂಬಲಕ್ಕೆ ನಿಲ್ಲಬೇಕಿದ್ದ ಕರ್ನಾಟಕದ ಬಿಜೆಪಿ ನಾಯಕರು ದೆಹಲಿ ಸರ್ಕಾರದ ವಕ್ತಾರರಂತೆ ವರ್ತಿಸುತ್ತಿರುವುದು ಯಾಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಅಸಮರ್ಪಕ ತೆರಿಗೆ ಹಂಚಿಕೆ, ನ್ಯಾಯಯುತ ಅನುದಾನದ ನಿರಾಕರಣೆ, ಮೂಲಭೂತ ಸೌಲಭ್ಯಗಳಿಗೆ ಬೆಂಬಲ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ ಮತ್ತು ಈಗ ಸಾಮಾನ್ಯ ಜನರ ಮೇಲೆ ಹೊರೆ ಹಾಕುವ ಮೆಟ್ರೋ ದರಗಳು, ಇವೆಲ್ಲವೂ ಕನ್ನಡಿಗರನ್ನು ಶೋಷಣೆಗೊಳಿಪಡಿಸಲು ಕೇಂದ್ರ ಸರ್ಕಾರದ ಅಸ್ತ್ರಗಳಾಗಿವೆ ಎಂದಿರುವ ಸಿಎಂ, ರಾಜ್ಯ ಬಿಜೆಪಿ ನಾಯಕರು ತಮ್ಮ ಹೈಕಮಾಂಡ್‌ನ ಓಲೈಕೆಗಾಗಿ ಸುಳ್ಳು ಮಾಹಿತಿ ನೀಡುವುದನ್ನು ಬಿಟ್ಟು, ಜನರ ಹಿತಕ್ಕಾಗಿ ಈಗಲಾದರೂ ತಮ್ಮದೇ ಪ್ರಧಾನಿಗಳ ಬಳಿ ಧ್ವನಿಯೆತ್ತಲಿ ಎಂದಿದ್ದಾರೆ.
























































