ಕೋಲಾರ:ಚುನಾವಣೋತ್ತರದಲ್ಲಿ ಸಿಎಂ ಯಾರಾಗಬಹುದೆಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ರೇಸ್ನಲ್ಲಿದ್ದು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ. ಈ ನಡುವೆ ಐಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರೂ ಭಾವೀ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ, ಆ ಸ್ಥಾನ ನನಗೆ ಬೇಡ ಎಂದು ಖರ್ಗೆ ಹೇಳಿದ್ದಾರೆ. ಕೋಲಾರದಲ್ಲಿ ಈ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಅಷ್ಟೇ ನಮ್ಮ ಗುರಿ ಎಂದರು.
ಪ್ರದೇಶ ಕಾಂಗ್ರೆಸ್ ಆಯೋಜಿಸಿದ ‘ಜೈ ಭಾರತ ಸಮಾವೇಶ’ದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಯಾರಾಗಬೇಕೆಂದು ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಳ್ಳಬೇಡಿ. ರಾಜ್ಯದ ಜನರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ. ಪಕ್ಷಕ್ಕೆ ಬಹುಮತ ಬಂದಾಗ ಸಿಎಂ ಬಗ್ಗೆ ಶಾಸಕರು ನಿರ್ಧರಿಸುತ್ತಾರೆ ಎಂದು ಸಲಹೆ ನೀಡಿದರು.
ಈ ಬಿಜೆಪಿ ಸರ್ಕಾರ ತೆಗೆಯದಿದ್ದರೆ ಯಾವುದೇ ಅಭಿವೃದ್ಧಿ ಆಗಲ್ಲ ಎಂದ ಅವರು, ಈ ಸರ್ಕಾರವನ್ನು ತೆಗೆದು ಹಾಕಿ ಕಾಂಗ್ರೆಸ್ ಸರ್ಕಾರವನ್ನು ಸ್ಥಾಪಿಸೋಣ ಎಂದು ಕರೆ ನೀಡಿದರು.


























































