ವಿಶ್ವದಲ್ಲಿ ಭಯ ಭೀತಿ ಹುಟ್ಟಿಸಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ಭಾರತದಲ್ಲಿ 900ಕ್ಕೂ ಅಧಿಕ ಮಂದಿಗೆ ತಗುಲಿದೆ. ವಿದೇಶಗಳಿಂದ ಭಾರತಕ್ಕೆ ವಾಪಸ್ ಆದ ಟೆಕ್ಕಿ, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಲ್ಲಿ ಇಲ್ಲಿಯವರೆಗೂ ಕೋವಿಡ್-19 ಪಾಸಿಟೀವ್ ಕಂಡು ಬಂದಿತ್ತು.
ಆದ್ರೀಗ, ಮುಂಬೈನ ಕೊಳಗೇರಿಯೊಳಗೂ ಕೊರೊನಾ ರೌದ್ರನರ್ತನ ಆರಂಭಿಸುವ ಲಕ್ಷಣಗಳು ಗೋಚರಿಸಿವೆ. ಮುಂಬೈನ ನಾಲ್ವರು ಸ್ಲಂ ನಿವಾಸಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ.
ಭಾರತದಲ್ಲಿ ಕೋವಿಡ್-19 ಮೂರನೇ ಹಂತ ತಲುಪಿದೆ ಎಂಬ ವರದಿ ಬಂದ ಬೆನ್ನಲ್ಲೇ ಸ್ಲಂನಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸೋಂಕು ಭಾರತೀಯರ ನಿದ್ದೆಗೆಡಿಸುವಂತೆ ಮಾಡಿದೆ. ನಾಲ್ವರು ಸ್ಲಂ ನಿವಾಸಿಗಳಿಗೆ ಕೊರೊನಾ ಪರೇಲ್ ಸ್ಲಂನಲ್ಲಿರುವ 65 ವರ್ಷದ ವ್ಯಕ್ತಿ, ಕಲೀನದ 37 ವರ್ಷದ ಕೊಳಗೇರಿ ನಿವಾಸಿ, ಘಾಟ್ಕೋಪರ್ ಸ್ಲಂನಲ್ಲಿ ವಾಸಿಸುತ್ತಿರುವ 25 ವರ್ಷದ ಓರ್ವ ಮತ್ತು 68 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ವರದಿಗಳ ಪ್ರಕಾರ, ಪರೇಲ್ ನ 65 ವರ್ಷದ ವ್ಯಕ್ತಿ ಪ್ರಭಾದೇವಿ ಪ್ರದೇಶದಲ್ಲಿ ಫುಡ್ ಮೆಸ್ ನಡೆಸುದ್ದವರು. ಕಲೀನದ ಕೊಳಗೇರಿ ನಿವಾಸಿ ಇಟಲಿಯಲ್ಲಿ ವೇಯ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದವರು. ಇನ್ನು, 68 ವರ್ಷದ ಘಾಟ್ಕೋಪರ್ ಸ್ಲಂ ನಿವಾಸಿ ನಗರದೊಳಗೆ ಮನೆಗೆಲಸ ಮಾಡುತ್ತಿದ್ದವರು. ಸೋಂಕಿತರನ್ನು ಮುಂಬೈ ಆಸ್ಪತ್ರೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಾಂಟ್ಯಾಕ್ಟ್ ಟ್ರೇಸಿಂಗ್ ಕಾರ್ಯ ಸದ್ಯ ಈ ನಾಲ್ವರ ಸಂಪರ್ಕಕ್ಕೆ ಬಂದವರು ಮತ್ತು ಕುಟುಂಬದವರನ್ನು ಪತ್ತೆ ಹಾಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಆದ್ರೆ, ಜನಸಾಂದ್ರತೆ ಹೆಚ್ಚಿರುವ ಸ್ಲಂನಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡುವುದೇ ಆರೋಗ್ಯ ಇಲಾಖೆಗಿರುವ ದೊಡ್ಡ ಚಾಲೆಂಜ್.
ಸರ್ಕಾರ ಮತ್ತು ಆರೋಗ್ಯ ಇಲಾಖೆ ಕೂಡಲೆ ಕಠಿಣ ಕ್ರಮಗಳನ್ನು ಕೈಗೊಂಡು ಸ್ಲಂ ನಿವಾಸಿಗಳ ಮೇಲೆ ನಿಗಾ ಇಟ್ಟರೆ ಸೂಕ್ತ. ಇಲ್ಲದಿದ್ದರೆ, ದೊಡ್ಡ ಅಪಾಯ ಕಟ್ಟಿಟ್ಟಬುತ್ತಿ. ಕೊಳಗೇರಿ ಪ್ರದೇಶದೊಳಗೆ ಕೊರೊನಾ ನುಗ್ಗಿಬಿಟ್ಟರೆ, ಮಹಾಮಾರಿಯನ್ನು ಕಟ್ಟಿಹಾಕುವುದು ಬಹಳ ಕಷ್ಟ.!