ಬೆಂಗಳೂರು: ಕ್ರೀಡೆಯಲ್ಲಿ ರಾಜ್ಯದ ಕ್ರೀಡಾಪಟುಗಳ ಉತ್ತಮ ಸಾಧನೆ ಹಾಗೂ 2028 ರ ಲಾಸ್ ಏಂಜಲೀಸ್ ಒಲಂಪಿಕ್ ನಲ್ಲಿ ಪದಕ ಪಟ್ಟಿಯಲ್ಲಿ ಅಗ್ರ 10 ರಾಷ್ಟ್ರಗಳಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಟ್ಯಾಲೆಂಟ್ ಪೂಲ್ ಯೋಜನೆಗೆ ಇಂದು ಚಾಲನೆ ನೀಡಲಾಯಿತು.
ಸಚಿವ ಡಾ.ನಾರಾಯಣಗೌಡ ಅವರ ನೇತೃತ್ವದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಶಿಕ್ಷಣ ಇಲಾಖೆ ಹಾಗೂ ಕ್ರೀಡಾ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಫಿಟ್ ಇಂಡಿಯಾ ಜೊತೆಗೂಡಿ ಕ್ರೀಡಾ ಪ್ರತಿಭಾನ್ವೇಷಣೆಗೆ ವಿಶೇಷ ಯೋಜನೆ ರೂಪಿಸಲಾಗಿದೆ.
ರಾಜ್ಯದಲ್ಲಿರುವ ಸುಮಾರು 8 ಸಾವಿರ ದೈಹಿಕ ಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಪ್ರದೇಶದ ಶಾಲೆಗಳ ಮಕ್ಕಳಲ್ಲಿ ಕ್ರೀಡಾ ಪ್ರತಿಭೆಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಗುರುತಿಸಲು ಅಗತ್ಯ ಕೌಶಲ್ಯವನ್ನು ಒದಗಿಸಲು ಆನ್‌ಲೈನ್ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ. ಇಂದು ಕಂಠೀರವ ಕ್ರೀಡಾಂಗಣದಲ್ಲಿ ಆನ್‌ಲೈನ್ ಮೂಲಕ ಈ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಗೋಪಾಲಕೃಷ್ಣ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೆಲ್ವ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
8 ಸಾವಿರ ದೈಹಿಕ ಶಿಕ್ಷಕರ ಪೈಕಿ ಮೊದಲ ಬ್ಯಾಚ್‌ನಲ್ಲಿ 1666 ಶಿಕ್ಷಕರಿಗೆ ಮೂರು ದಿನಗಳ ಕಾಲ ನಾಲ್ಕು ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ. ಕ್ರೀಡಾ ತಜ್ಞರಿಂದ ದೈಹಿಕ ಶಿಕ್ಷಕರಿಗೆ ತರಬೇತಿ ನೀಡಿ, ಗ್ರಾಮೀಣ ಪ್ರದೇಶಗಳಲ್ಲಿ ಯಾವ ರೀತಿ ಪ್ರತಿಭೆಗಳನ್ನು ಗುರುತಿಸಬೇಕು, ಪ್ರತಿಭಾನ್ವೇಷಣೆಯಲ್ಲಿ ದೈಹಿಕ ಶಿಕ್ಷಕರ ಪಾತ್ರವೇನು ಹಾಗೂ ಫಿಟ್ ಇಂಡಿಯಾ ಯೋಜನೆಯಲ್ಲಿ ಅರಿವು ಮೂಡಿಸಿ ರಾಷ್ಟ್ರೀಯ ಅಂಕಪಟ್ಟಿಯಲ್ಲಿ ರಾಜ್ಯದ ಸ್ಥಾನವನ್ನು ಉತ್ತಮಗೊಳಿಸುವ ಬಗ್ಗೆ ದೈಹಿಕ ಶಿಕ್ಷಕರಿಗೆ ತರಬೇತಿಯಲ್ಲಿ ತಿಳಿಸಲಾಗುತ್ತದೆ.
ಒಬ್ಬ ದೈಹಿಕ ಶಿಕ್ಷಕ ಕನಿಷ್ಠ 10 ಕ್ರೀಡಾ ಪ್ರತಿಭೆಗಳನ್ನು ಗುರುತಿಸಬೇಕು. ಮಾನಿಟರಿಂಗ್ ಸಿಸ್ಟಮ್ ಗೆ ಮಾಹಿತಿಗಳನ್ನು ಅಪಲೋಡ್ ಮಾಡಬೇಕು. ಕ್ರೀಡಾ ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಕ್ರೀಡಾ ತರಬೇತಿ ನೀಡಲಾಗುತ್ತದೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ದೀರ್ಘಾವಧಿ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೆ ಮಾನಿಟರಿಂಗ್ ಮಾಡಲಾಗುತ್ತದೆ.
ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಷ್ಟ್ರಗಳು ‘LongTerm Athletic development program’ ಹಾಕಿಕೊಂಡಿರುತ್ತವೆ. ಅದೇ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವೂ ಈ ರೀತಿಯ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಮೂಲಕ ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ.
ಕೇಂದ್ರ ಕ್ರೀಡಾ ಇಲಾಖೆಯು ಭಾರತೀಯ ಕ್ರೀಡಾಪಟುಗಳು ಪದಕ ಗೆಲ್ಲಬಹುದಾದ ಅಥ್ಲೆಟಿಕ್ಸ್, ಕುಸ್ತಿ, ಶೂಟಿಂಗ್, ಬಾಕ್ಸಿಂಗ್, ಆರ್ಚರಿ, ಬ್ಯಾಡ್ಮಿಂಟನ್, ಹಾಕಿ ಸೇರಿದಂತೆ 10 ಒಲಂಪಿಕ್ ಕ್ರೀಡೆಗಳನ್ನು ಗುರುತಿಸಿದೆ. 2028 ರ ಲಾಸ್ ಎಂಜಲೀಸ್ ಒಲಿಂಪಿಕ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ, ಅಗತ್ಯ ತರಬೇತಿ ನೀಡಲು ಈ ಯೋಜನೆಯಿಂದ ಅನುಕೂಲ ಆಗಲಿದೆ.
ತಳಮಟ್ಟದಲ್ಲೇ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ತರಬೇತಿ ನೀಡಲು ಅನುಕೂಲ: ಸಚಿವ ಡಾ.ನಾರಾಯಣಗೌಡ
ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳನ್ನು ಗುರುತಿಸದೇ ಹಲವರು ಅವಕಾಶ ವಂಚಿತರಾಗುತ್ತಿದ್ದಾರೆ. ಹಾಗಾಗಿ, ಪ್ರಾಥಮಿಕ ಹಂತದಲ್ಲಿ ಪ್ರತಿಭೆಗಳನ್ನು ಗುರುತಿಸಲು ದೈಹಿಕ ಶಿಕ್ಷಕರ ಪಾತ್ರ ಬಹಳ ಮಹತ್ವವಾಗಿರುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಕರಿಗೆ ಕ್ರೀಡಾ ಪ್ರತಿಭಾನ್ವೇಷಣೆ ಕುರಿತು ಆನ್‌ಲೈನ್ ತರಬೇತಿ ನೀಡಲಾಗುತ್ತದೆ. ಇದರಿಂದ ಪ್ರತಿಭಾನ್ವಿತರನ್ನು ಗುರುತಿಸಿ, ಅವರಿಗೆ ಅಗತ್ಯ ತರಬೇತಿ ನೀಡಲು ಸಹಾಯವಾಗಲಿದೆ. ಇದರಿಂದ 2028 ರ ಲಾಸ್ ಏಂಜಲೀಸ್ ಒಲಂಪಿಕ್‌ನಲ್ಲಿ ಕರ್ನಾಟಕದಿಂದ ಹೆಚ್ಚಿನ ಕ್ರೀಡಾಪಟುಗಳು ರಾಷ್ಟ್ರವನ್ನು ಪ್ರತಿನಿಧಿಸಿ ಹೆಚ್ಚಿನ ಪದಕಗಳನ್ನು ಗೆಲ್ಲಲು ಯೋಜಿಸಲಾಗಿರುವ ಮಿಷನ್ ಒಲಂಪಿಕ್‌ಗೆ ಅನುಕೂಲವಾಗಲಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.