ಬೆಂಗಳೂರು: ರಾಜಧಾನಿ ಸಮೀಪದ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿ ಶುಕ್ರವಾರ ಬೆಳಗಿನ ಜಾವ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸ್ನಲ್ಲಿ ಇದ್ದ ಸುಮಾರು 40 ಪ್ರಯಾಣಿಕರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಸಂಭವಿಸಿದ ಈ ಘಟನೆಗೆ, ರಸ್ತೆ ಕಾಮಗಾರಿ ಹಿನ್ನೆಲೆ ಬಸ್ ನಿಧಾನವಾಗಿ ಸಾಗುತ್ತಿದ್ದ ವೇಳೆ ಚಾಲಕ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವುದು ಕಾರಣ ಎನ್ನಲಾಗಿದೆ. ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ‘ಸಂಜನಾ ಟ್ರಾವೆಲ್ಸ್’ ಬಸ್ ಅಪಘಾತದ ಬಳಿಕ ಕ್ಷಣಾರ್ಧದಲ್ಲೇ ಬೆಂಕಿಗೆ ಆಹುತಿಯಾಯಿತು.
ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಚಾಲಕ ಹಾಗೂ ಪ್ರಯಾಣಿಕರು ತಕ್ಷಣ ಬಸ್ನಿಂದ ಹೊರಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದ ಪರಿಣಾಮ ಲಗೇಜ್ ಬಾಕ್ಸ್ನಲ್ಲಿ ಇಟ್ಟಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡ ಪ್ರಯಾಣಿಕರು ಅಸಹಾಯ ಸ್ಥಿತಿಗೆ ತಲುಪಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ನೆಲಮಂಗಲ ಸಂಚಾರಿ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
























































