ಮಂಗಳೂರು: ಬಂದರು ನಗರಿಯ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿ ಕಾರ್ಮಿಕರ ಸಾವನ್ನಪ್ಪಿದ ಪ್ರಕರಣ ಕುರಿತಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಫಿಶ್ ಮಿಲ್ ಮಾಲೀಕರ ವಿರುದ್ದ ಐಪಿಸಿ 304ಅಡಿ ಪ್ರಕರಣ ದಾಖಲಿಸಲಾಗಿದ್ದು, ಕಂಪೆನಿಗೆ ಸೇರಿದ ನಾಲ್ವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಫಿಶ್ ಮಿಲ್ ಮಾಲೀಕರ ವಿರುದ್ದ ಐಪಿಸಿ 304 ಅಡಿ ಪ್ರಕರಣ ದಾಖಲಿಸಲಾಗಿದೆ. ಬಜಪೆ ಠಾಣೆಯಲ್ಲಿ ಐಪಿಸಿ 337, 338, 304 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲು ಮಾಡಲಾಗಿದೆ ಎಂದರು.
ಶ್ರೀಅಲ್ಕಾ ಎಲ್.ಎಲ್.ಎಲ್ ಮೀನು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಈ ಘಟನೆ ಸಂಭವಿಸಿದ್ದು, ಇದರ ಮಾಲೀಕ ಮುಂಬೈ ಮೂಲದ ರಾಜು ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ. ಕಂಪನಿಯ ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್, ಏರಿಯಾ ಮ್ಯಾನೇಜರ್ ಕುಬೇರ್ ಗಾಡೆ, ಸೂಪರ್ವೈಸರ್ ಮೊಹಮ್ಮದ್ ಅನ್ವರ್ , ಫಾರೂಕ್ ವಶಕ್ಕೆ ಪಡೆಯಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ದುರ್ಘಟನೆಯಲ್ಲಿ ಕಾರ್ಮಿಕರಾದ ಮೊಹಮ್ಮದ್ ಸಮಿಉಲ್ಲಾ ಇಸ್ಲಾಮ್, ಉಮ್ಮರ್ ಫಾರೂಕ್, ನಿಜಾಮುದ್ದೀನ್ ಆಲಿಸ್, ಮಿರಾಜುಲ್ ಇಸ್ಲಾಂ, ಶರಾಫತ್ ಎಂಬವರು ಸಾವನ್ನಪ್ಪಿದ್ದಾರೆ.
ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಿಗೆ ಯಾವುದೇ ರಕ್ಷಣಾತ್ಮಕ ಉಪಕರಣಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ.