ಮಂಗಳೂರು: ಪ್ರಧಾನಿ ನರೇಂದ್ರ ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿದ ವೇಳೆ, ಸಿಎಂ ಸಿದ್ದರಾಮಯ್ಯ ಅವರ ಮಾರುದ್ದದ ಪತ್ರವನ್ನು ಸಚಿವ ದಿನೇಶ್ ಗುಂಡೂರಾವ್ ನೀಡಿದ್ದಾರೆ.
ಪ್ರಧಾನಮಂತ್ರಿ ಮೋದಿಯವರು ಮಂಗಳೂರಿಗೆ ಆಗಮಿಸಿದ ವೇಳೆ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ದಿನೇಶ್ ಗುಂಡೂರಾವ್. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಬರೆದಿರುವ ಪತ್ರವನ್ನು ನೀಡಿ, ಅದರಲ್ಲಿರುವಂತೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಬಗ್ಗೆ ಗಮನಸೆಳೆದಿದ್ದಾರೆ. ಬೆಂಬಲ ಬೆಲೆಯಂತೆ ಬೆಳೆ ಖರೀದಿ ವ್ಯವಸ್ಥೆ ನಿರ್ಮಿಸುವಲ್ಲಿ ಕೇಂದ್ರ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕೆಂದು ಮನವಿ ಮಾಡಿರುವ ಪತ್ರ ಇದಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್, ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿಕೊಡಲಾಯಿತು. ಈ ಪತ್ರದಲ್ಲಿರುವಂತೆ ನಮ್ಮ ರಾಜ್ಯದ ರೈತರ ಸಂಕಷ್ಟವನ್ನು ಕೂಲಂಕುಷವಾಗಿ ಪ್ರಧಾನಿಗಳಾದ ನರೇಂದ್ರ ಮೋದಿಯವರಿಗೆ ವಿವರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮೆಕ್ಕೆಜೋಳ ಮತ್ತು ಹೆಸರು ಕಾಳು (ಮೂಂಗ್) ಬೆಳೆಗಳ ತೀವ್ರ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದ ಕಾರಣ ಈ ಬಗ್ಗೆ ನಿಮ್ಮ ಗಮನಕ್ಕೆ ತಂದು ಬೆಂಬಲ ಬೆಲೆಯಲ್ಲಿ ರೈತರಬೆಳೆಗಳನ್ನು ಖರೀದಿಸುವಂತಹ ವ್ಯವಸ್ಥೆ ನಿರ್ಮಾಣ ಮಾಡುವ ಕುರಿತು ಈ ಪತ್ರ ಬರೆಯಲಾಗಿದೆ ಎಂದವರು ತಿಳಿಸಿದ್ದಾರೆ.






















































