ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಡಿಸೆಂಬರ್ 23 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದಾಗಿ ಭೂ ಪರಿವರ್ತನೆ ಈಗ ಸರಳವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಇನ್ನು ಮುಂದೆ ಇವೆಲ್ಲವೂ ಸರಳೀಕರಣ ಎಂದಿದ್ದಾರೆ.
ಭಾರತ ದೇಶ ಪ್ರಸ್ತುತ ನವೀಕರಿಸಬಹುದಾದ ಇಂಧನದ ಕಡೆ ಹೆಜ್ಜೆ ಇಡುತ್ತಿದೆ. ಹೀಗಾಗಿ ಇದಕ್ಕೂ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ. ಇಂಧನ ಇಲಾಖೆಯ ಅನುಮತಿ ಪಡೆದಿದ್ದರೆ, ನವೀಕರಿಸಬಹುದಾದ ಇಂಧನದ ಯೋಜನಾ ಘಟಕವನ್ನು ನಿರ್ಮಿಸಲು ಭೂ ಪರಿವರ್ತನೆ ಅಗತ್ಯ ಇಲ್ಲ. ಭೂ ಪರಿವರ್ತನೆಗೆ ಸಂಬಂಧಿಸಿದ ವಿಚಾರಗಳನ್ನು ಸರಳೀಕರಣಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕು ಎಂದು ಈ ಹಿಂದೆ ಯಾವುದೇ ಸ್ಪಷ್ಟ ನಿಯಮ ಇರಲಿಲ್ಲ. ಪರಿಣಾಮ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅನೇಕ ಆದೇಶಗಳನ್ನು ಹೊರಡಿಸಿರುವ ಉದಾಹರಣೆಗಳು ಸಾಕಷ್ಟಿವೆ ಎಂದಿರುವ ಸಿಎಂ, ಆರ್‌ಸಿಸಿಎಂಎಸ್ ಸೇರಿದಂತೆ ಡಿಜಿಟೈಸೇಷನ್ ಮುಖಾಂತರ ಆದೇಶಗಳನ್ನು ನೀಡಲಾಗುವುದು. ಇವು ಸುಧಾರಣಾ ಕಾನೂನುಗಳಿಗೆ ನ್ಯಾಯಿಕ ಬಲವನ್ನು ಒದಗಿಸಲಿದೆ ಎಂದು ವಿವರಿಸಿದ್ದಾರೆ.
ಕಾನೂನು ಮೀರಿ ಯಾರೂ ನ್ಯಾಯಧಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ವಿವಿಧ ಕಲಂಗಳು ಹಾಗೂ ನಿಯಮಗಳಿಗೆ ತಿದ್ದುಪಡಿ ಮೂಲಕ ಜಾರಿಗೊಳಿಸಲಾಗಿದೆ ಎಂದು ತಿಳಿಸಿರುವ ಅವರು, ಕಂದಾಯ ನ್ಯಾಯಾಲಯಗಳನ್ನು ಆನ್‌ಲೈನ್ ಮುಖಾಂತರ ನಡೆಸಲು ಕಾನೂನು ತರಲಾಗಿದೆ. ವಾದಿ ಹಾಗೂ ಪ್ರತಿವಾದಿಗಳು ಕಚೇರಿಗಳಿಗೆ ಸುತ್ತುವುದರ ಬದಲಿಗೆ ಅವರು ಆನ್‌ಲೈನ್ ಮುಖಾಂತರವೇ ನ್ಯಾಯಾಲಯ ಕಲಾಪಗಳಿಗೆ ಭಾಗವಹಿಸುವ ಸುಲಭ ಮಾರ್ಗ ನೀಡಲಾಗಿದೆ. ಅದೇ ರೀತಿ ಭೂ ಸುರಕ್ಷಾ ಮೋಜನಿಗೆ ಈಗ ಕಾನೂನಿನ ಬಲ ಒದಗಿಸಲಾಗಿದ್ದು, ನಿಯಮಗಳಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.



















































