ನವದೆಹಲಿ: ದೇಶದಲ್ಲಿ ಆರ್ಥಿಕ ಸುಧಾರಣೆಗಳ ವೇಗ ಹೆಚ್ಚುತ್ತಿರುವ ಹಿನ್ನೆಲೆ ಭಾರತ ಜಾಗತಿಕ ಬೆಳವಣಿಗೆಯ ಎಂಜಿನ್ ಆಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ET Now ಆಯೋಜಿಸಿದ್ದ ‘ಗ್ಲೋಬಲ್ ಬಿಸಿನೆಸ್ ಸಮಿಟ್–2026’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೈಗೊಂಡಿರುವ ಸುಧಾರಣೆಗಳು ಬಲವಂತದಿಂದ ಅಲ್ಲ, ಜನಸಾಮಾನ್ಯರಿಗೆ ಅನುಕೂಲವಾಗುವ ವ್ಯವಸ್ಥೆ ನಿರ್ಮಿಸಲು ಮತ್ತು ‘ವಿಕಸಿತ ಭಾರತ’ ಗುರಿ ಸಾಧಿಸಲು ರೂಪಿಸಲ್ಪಟ್ಟವು ಎಂದು ತಿಳಿಸಿದರು.
ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ತ್ವರಿತಗೊಂಡಿರುವುದರಿಂದ ದೇಶದಾದ್ಯಂತ ಹೆದ್ದಾರಿ ಮತ್ತು ರೈಲು ಮಾರ್ಗಗಳ ಅಭಿವೃದ್ಧಿಗೆ ವೇಗ ದೊರೆತಿದೆ. ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ಹೂಡಿಕೆ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.
“ಬಂಡವಾಳ ವೆಚ್ಚದಲ್ಲಿ ಹೆಚ್ಚಳ ಮಾಡುವ ಮೂಲಕ ದೊಡ್ಡ ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ನೀಡಲಾಗಿದೆ. ಇದರಿಂದ ಆರ್ಥಿಕ ಬೆಳವಣಿಗೆಗೆ ಗತಿ ಸಿಗುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಬಯೋಫಾರ್ಮಾ, ಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳಿಗೂ ವಿಶೇಷ ಪ್ರಾಧಾನ್ಯ ನೀಡಲಾಗಿದೆ” ಎಂದು ಪ್ರಧಾನಿ ಹೇಳಿದರು.
ಬಜೆಟ್‌ನಲ್ಲಿ ವೆಚ್ಚದ ಮೇಲಷ್ಟೇ ಅಲ್ಲ, ಫಲಿತಾಂಶಗಳ ಮೇಲೂ ಒತ್ತು ನೀಡಲಾಗಿದೆ. 2014ರ ಬಳಿಕ ಯೋಜನೆಗಳ ಅನುಷ್ಠಾನ ವೇಗದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂದು ಅವರು ಹೇಳಿದರು.
ಸುಧಾರಣೆಗಳ ಭಾಗವಾಗಿ ಜಿಎಸ್‌ಟಿ ಮತ್ತು ಕಾರ್ಮಿಕ ಕ್ಷೇತ್ರದಲ್ಲೂ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಕಳೆದ ದಶಕದಲ್ಲಿ ಜಗತ್ತಿನ ಗಮನ ಸೆಳೆದ ಭಾರತೀಯ ಸುಧಾರಣೆಗಳಲ್ಲಿ Unified Payments Interface (ಯುಪಿಐ) ಪ್ರಮುಖವಾದುದು. ಇದು ಕೇವಲ ಅಪ್ಲಿಕೇಶನ್ ಅಲ್ಲ, ನೀತಿ ಮತ್ತು ವಿತರಣಾ ವ್ಯವಸ್ಥೆಯ ಸಮನ್ವಯದ ಉದಾಹರಣೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ಅಭಿವೃದ್ಧಿ ಮಾದರಿಯನ್ನು ರೂಪಿಸಿಕೊಳ್ಳಬೇಕೆಂಬ ಅರಿವು ಇಂದು ಮೂಡುತ್ತಿದೆ. ಭಾರತವು ಯಾವುದೇ ದೇಶದ ಮಾದರಿಯನ್ನು ಆಮದು ಮಾಡಿಕೊಳ್ಳದೆ ಸ್ವಂತ ದಾರಿಗೆ ಹೆಜ್ಜೆಯಿಟ್ಟಿದೆ ಎಂದು ಹೇಳಿದರು.
2014ರ ಬಳಿಕ ಅನೇಕ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. “ಇಂದು ಭಾರತ ಆತ್ಮವಿಶ್ವಾಸದಿಂದ ಮುಂದಾಗಿದೆ. ಅದಕ್ಕಾಗಿಯೇ ಜಗತ್ತು ನಮ್ಮನ್ನು ವಿಶ್ವಾಸದಿಂದ ನೋಡುತ್ತಿದೆ” ಎಂದು ಪ್ರಧಾನಿ ಹೇಳಿದರು.
ಭಾರತವು ಜಾಗತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹೊಸ ವಿಶ್ವ ವ್ಯವಸ್ಥೆಯಲ್ಲಿ ‘ಒಂದು ಮಾದರಿ ಎಲ್ಲರಿಗೂ’ ಎಂಬ ಕಲ್ಪನೆ ಪ್ರಶ್ನೆಗೆ ಒಳಗಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

























































