ರಾಮನಗರ,: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೊಂದಣಿ ಪ್ರಾರಂಭವಾಗಿದ್ದು, ಈ ಬಗ್ಗೆ ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಹೆಚ್ಚಿನ ರೈತರನ್ನು ನೊಂದಣಿ ಮಾಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ ಕಾಯ೯ಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಾ. ನಾರಾಯಣಗೌಡ ಅವರು ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಬೆಳೆ ವಿಮೆ ನೊಂದಣಿಯಿಂದ ರೈತರಿಗೆ ಆಗುವ ಅನುಕೂಲಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಿ ಎಂದ ಅವರು ವಿಮಾ ಕಂಪನಿಗಳು ರೈತರಿಗೆ ಪಾವತಿ ಮಾಡಿರುವ ಹಣ ಹಾಗೂ ಬಾಕಿ ಉಳಿಸಿರುವ ಹಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಪೌಂಡ್ ನಿರ್ಮಾಣವಾಗಬೇಕು, ಸೋಲಾರ್ ದೀಪಗಳ ಅಳವಡಿಕೆ, ಕ್ರೀಡಾಪಟುಗಳಿಗೆ ಬಟ್ಟೆ ಬದಲಾಯಿಸಲು ಕೊಠಡಿ ಸೇರಿದಂತೆ ವಿವಿಧ ಕೆಲಸಗಳು ನಡೆಯಬೇಕಿದ್ದು, ಕೋವಿಡ್ ಹಿನ್ನಲೆಯಲ್ಲಿ ವಿವಿಧ ಯುವಜನ ಕಾರ್ಯಕ್ರಮಗಳು ಈ ಬಾರಿ ನಡೆದಿರುವುದಿಲ್ಲ. ಅವುಗಳ ಅನುದಾನವನ್ನು ಬದಲಾವಣೆ ಮಾಡಿಕೊಂಡು ಕ್ರೀಡಾಂಗಣದ ಕೆಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ವೆಚ್ಚವಾಗದ 20 ಕೋಟಿ ರೂ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ 20 ಕೋಟಿ ಹಣ ವೆಚ್ಚವಾಗಿರುವುದಿಲ್ಲ. ಈ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಸಚಿವರು, ಇವುಗಳನ್ನು ಕೇಂದ್ರ ಹಾಗೂ ಉನ್ನತ ಮಟ್ಟದಲ್ಲಿ ಪರಿಶೀಲಿಸಿದಾಗ ಅನುದಾನ ವೆಚ್ಚವಾಗದೇ ಇರುವುದು ಕಂಡು ಬಂದರೆ ಆರ್ಥಿಕ ಇಲಾಖೆ ಹಾಗೂ ಕೇಂದ್ರ ಸರ್ಕಾರದಿಂದ ಮುಂದಿನ ಅನುದಾನ ಬಿಡುಗಡೆಯಾಗುವುದಿಲ್ಲ. ಸದರಿ ಯೋಜನೆಯ ಹಣವನ್ನು ಕೋವಿಡ್ ಕೆಲಸಗಳಿಗೂ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಕಾಮಗಾರಿಗಳನ್ನು ಕೈಗೊಂಡು ಒಂದು ತಿಂಗಳೊಳಗಾಗಿ ಅನುದಾನ ವೆಚ್ಚ ಮಾಡುವುದು, ಇಲ್ಲಾವಾದಲ್ಲಿ ಹಿಂಪಡೆಯಲಾಗುವುದು ಎಂದರು.
ಜಿಲ್ಲೆಯಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಸಹ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಳ್ಳಬಹುದಾಗಿದ್ದು, ಕ್ರೀಡಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿವಂತೆ ತಿಳಿಸಿದರು.
ಬಯಲು ಸೀಮೆ ಪ್ರದೇಶಾಭಿವೃದ್ಧಿ ಯೋಜನೆಯಡಿ 2019-20 ನೇ ಸಾಲಿನಲ್ಲಿ 100 ಕಾಮಗಾರಿಗಳನ್ನು ಕೈಗೊಂಡಿದ್ದು, 17 ಪೂರ್ಣವಾಗಿರುತ್ತದೆ. 13 ಪ್ರಗತಿಯಲ್ಲಿರುತ್ತದೆ. 70 ಆಡಳಿತಾತ್ಮಕ ಅನುಮೋದನೆ ಹಾಗೂ ಇನ್ನಿತರ ಕಾರಣಗಳಿಂದ ಪ್ರಾರಂಭವಾಗಿರುವುದಿಲ್ಲ. 70 ಕಾಮಗಾರಿಗಳು ಪ್ರಾರಂಭವಾಗಿಲ್ಲ ಈ ಬಗ್ಗೆ ಸೂಕ್ತ ಕಾರಣ ನೀಡುವಂತೆ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಯಲು ಸೀಮೆ ಪ್ರದೇಶಾಭಿವೃದ್ಧಿ ಯೋಜನೆ, ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ವಿಶೇಷ ಅಭಿವೃದ್ಧಿ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಕಾಲ ಕಾಲಕ್ಕೆ ನಡೆಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ವಿಶೇಷ ಅಭಿವೃದ್ಧಿ ಯೋಜನೆಯಡಿ 2020-21 ನೇ ಸಾಲಿನಲ್ಲಿ 37.52 ಕೋಟಿ ರೂ ಅನುದಾನ ನಿಗಧಿಯಾಗಿದ್ದು, 28.57 ಕೋಟಿ ರೂ ಬಿಡುಗಡೆಯಾಗಿ 26.20 ಕೋಟಿ ರೂ ವೆಚ್ಚವಾಗಿ ಶೇ 96 ಸಾಧನೆಯಾಗಿರುತ್ತದೆ ಎಂದರು.
ರಾಮನಗರ ಹಾಗೂ ಕನಕಪುರ ತಾಲ್ಲೂಕಿನಲ್ಲಿ ಮಾತ್ರ ಕ್ರೀಡಾಂಗಣವಿದ್ದು, ಚನ್ನಪಟ್ಟಣದಲ್ಲಿ ಸ್ಥಳ ಗುರುತಿಸಲಾಗಿದ್ದು, ಕ್ರೀಡಾಂಗಣ ನಿರ್ಮಾಣವಾಗಬೇಕಿದೆ. ಮಾಗಡಿ ತಾಲ್ಲೂಕಿನಲ್ಲಿ ಸ್ಥಳದ ಸಮಸ್ಯೆ ಇದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅವರು ಸಭೆಗೆ ಮಾಹಿತಿ ನೀಡಿದರು.