ಬೆಂಗಳೂರು: ಹಾಲು ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ಹೋರಾಟ ಮಾಡಲಿದೆ.
ಈ ಕುರಿತು ಮಾಹಿತಿ ಒದಗಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಯುಗಾದಿ ಹಬ್ಬದ ಕಳೆದ ನಂತರ ಇದರ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.
ಈವರೆಗೆ ಹೆಚ್ಚು ಮಾಡಿದ 9 ರೂ. ನಲ್ಲಿ ಲಾಭವನ್ನು ರೈತರಿಗೆ ನೀಡಿಲ್ಲ. ಪ್ರೋತ್ಸಾಹಧನವನ್ನು ಇನ್ನೂ ಬಾಕಿ ಉಳಿಸಿಕೊಳ್ಳಲಾಗಿದೆ. ಈಗ ಹೆಚ್ಚು ಮಾಡಿದ ದರದಲ್ಲಿ ಎಷ್ಟು ಸರ್ಕಾರಕ್ಕೆ ಹೋಗಲಿದೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೇ ಪ್ರೋತ್ಸಾಹಧನ ಹೆಚ್ಚಳ ಕುರಿತು ಘೋಷಣೆ ಮಾಡಿತ್ತು. ಅದನ್ನು ಇನ್ನೂ ಜಾರಿ ಮಾಡಿಲ್ಲ ಎಂದರು.
ಬಿಜೆಪಿ ಅವಧಿಯಲ್ಲಿ ಮಾರ್ಗಸೂಚಿ ದರ ಇಳಿಸಲಾಗಿತ್ತು. ಬಸ್ ಟಿಕೆಟ್ ದರ, ನೀರಿನ ದರ ಏರಿಸಿರಲಿಲ್ಲ. ಹಿಂದಿನ ಯಾವುದೇ ಮುಖ್ಯಮಂತ್ರಿ ಮಾಡದಷ್ಟು ಸಾಲವನ್ನು ಸಿಎಂ ಸಿದ್ದರಾಮಯ್ಯ ಒಬ್ಬರೇ ಮಾಡಿದ್ದಾರೆ. ಅಂದರೆ 65% ನಷ್ಟು ಸಾಲವನ್ನು ಇವರೊಬ್ಬರೇ ಮಾಡಿದ್ದಾರೆ ಎಂದರು.
ಬಿಜೆಪಿಯಲ್ಲಿ ನಾವೆಲ್ಲರೂ ಒಂದಾಗಿ ಹೋಗಬೇಕು ಎಂಬ ಅಭಿಪ್ರಾಯ ನನ್ನದು. ಪಕ್ಷದ ಹಿರಿಯರು ಕೈಗೊಂಡ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಯಾರೂ ಕೂಡ ಪಕ್ಷದ ವಿರುದ್ಧವಾಗಿ ಮಾತಾಡಬಾರದು ಎಂದರು.