ಬೆಂಗಳೂರು: ಬೆಂಗಳೂರು-ವಿಜಯಪುರ ಬೈಪಾಸ್ ರೈಲು ಯೋಜನೆ ಜಾರಿಗೆ ವೇದಿಕೆ ಸಜ್ಜಾಗಿದೆ. ಈ ಯೋಜನೆ ಜಾರಿಯಾದರೆ ಈ ಎರಡು ನಗರಗಳ ನಡುವಿನ ರೈಲು ಪ್ರಯಾಣ ಅವಧಿಯು 14 ತಾಸುಗಳಿಂದ 10 ತಾಸಿಗೆ ಇಳಿಕೆ ಸಾಧ್ಯತೆ ಇದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರು-ವಿಜಯಪುರ ನಡುವಿನ ರೈಲು ಸಂಚಾರಕ್ಕೆ 14-15 ಗಂಟೆಗಳ ಕಾಲ ಹಿಡಿಯುತ್ತಿದೆ. ಇದರಿಂದಾಗಿ, ಎರಡೂ ನಗರಗಳ ನಡುವೆ ಓಡಾಡುವ ಸಾರ್ವಜನಿಕರಿಗೆ ಸಮಯ ವ್ಯರ್ಥವಾಗುತ್ತಿದೆ. ಇದನ್ನು 10 ಗಂಟೆಗಳಿಗೆ ಇಳಿಸಲು ರೈಲ್ವೆ ಅಧಿಕಾರಿಗಳೊಂದಿಗೆ, ಸಚಿವರೊಂದಿಗೆ ಹಲವು ಸಭೆಗಳನ್ನು ನಡೆಸಿ, ಗದಗ ಬೈಪಾಸ್ ಮೂಲಕ ರೈಲು ಸಂಚಾರಕ್ಕೆ ಒತ್ತಾಯಿಸಿ ರೂಪುರೇಷೆ ಸಿದ್ಧಪಡಿಸಲಾಯಿತು ಎಂದು ಎಂ. ಬಿ.ಪಾಟೀಲ್ ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವರಿಗೂ ಮನವಿ ನೀಡಿ ಒತ್ತಾಯಿಸಿದ್ದೆ ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಈ ಎಲ್ಲಾ ಪ್ರಯತ್ನಗಳ ಫಲವೆಂಬಂತೆ 2 ದಿನಗಳ ಹಿಂದೆ ಬೆಂಗಳೂರು-ವಿಜಯಪುರದ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮಾರ್ಗವಾಗಿ ವಿಶೇಷ ರೈಲು ಓಡಿಸಿರುವುದು ಸ್ವಾಗತಾರ್ಹ ಎಂದಿರುವ ಅವರು, ನಮ್ಮ ಪ್ರಯತ್ನಗಳಿಗೆ ಸಾರ್ಥಕ ಫಲಿತಾಂಶ – ಸಾರ್ವಜನಿಕರಿಗೆ ಪ್ರಯಾಣದ ಅವಧಿ ಕಡಿಮೆಯಾಗಿದ್ದು ಸಂತಸದ ವಿಷಯ ಎಂದಿದ್ದಾರೆ.

























































