ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಲಘು ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಆಗಿಂದಾಗೆ ಅಪಘಾತಗಳು ಸಂಭವಿಸುತ್ತಲೇ ಇದ್ದು ಇದಕ್ಕೆ ಕಡಿವಾಣ ಹಾಕುವ ಸಂಬಂಧ ಈ ನಿಯಮ ಜಾರಿಗೆ ತರಲಾಗಿದೆ. ಬೈಕ್, ಆಟೋ ಸೇರಿ ಕೆಲವು ವಾಹನಗಳ ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಷೇಧಿಸಿ ಆದೇಶಿಸಿದೆ.
ಜುಲೈ 12ರಂದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೈಕ್, ಆಟೋ, ಟ್ರಾಕ್ಟರ್ ಹಾಗೂ ಇತರ ಸಣ್ಣ ವಾಹನಗಳಿಗೆ ನಿಷೇಧ ಹೇರಿ ಅಧಿಸೂಚನೆ ಹೊರಡಿಸಿದೆ. ಅಷ್ಟೇ ಅಲ್ಲ, ಅಪಘಾತ ನಿಯಂತ್ರಣ ಉದ್ದೇಶದಿಂದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ವಾಹನಗಳ ವೇಗದ ಮಿತಿಯನ್ನು ಗಂಟೆಗೆ 80ರಿಂದ 100 ಕಿಲೋಮೀಟರ್ಗೆ ಸೀಮಿತಗೊಳಿಸಲಾಗಿದೆ. ಆದರೂ ಕೂಡಾ ಹೆದ್ದಾರಿಯಲ್ಲಿ ಈ ನಿಯಮದ ಉಲ್ಲಂಘನೆಯಾಗುತ್ತಿರುವುದು ಅಧಿಕಾರಿಗಳಿಗೂ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿರುವ ಪೊಲೀಸರು, ಈ ತಿಂಗಳಲ್ಲಿ ಅತಿವೇಗದ ಚಾಲನೆ ಆರೋಪದಲ್ಲಿ 2,000ಕ್ಕೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

























































