ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿಗೆ ದೂರದೃಷ್ಟಿ ಇಟ್ಟುಕೊಂಡು ಶಾಶ್ವತವಾದ ಕೆಲಸ ಮಾಡಬೇಕೆಂದು ತೀರ್ಮಾನ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಚ್ಎಸ್ಆರ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಅಟಲ್ ಬಿಹಾರಿ ವಾಜಪೇಯಿ ಹೊನಲು ಬೆಳಕಿನ ಸುಸಜ್ಜಿತ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಿದ ಅವರು, ಬೆಂಗಳೂರು ಒಂದು ಅಂತರರಾಷ್ಟ್ರೀಯ ನಗರ. ಇದನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಇಲ್ಲಿಯ ಜನ ಬಹಳ ಸುಸಂಸ್ಕೃತರು.ತಮ್ಮ ಕೆಲಸಗಳನ್ನು ಮಾಡುತ್ತಾ, ಸಾಧ್ಯವಿದ್ದಷ್ಟು ಜನಸೇವೆಗೆ ಭಾಗೀದಾರರಾಗುತ್ತಿದ್ದಾರೆ. ಬೆಂಗಳೂರಿನ ಮಂತ್ರಿಯಾಗಿ ಬೆಂಗಳೂರಿನ ಸೇವೆ ಮಾಡುವಂಥ ಭಾಗ್ಯ ನನಗೆ ದೊರೆತಿದೆ ಎಂದು ಭಾವಿಸಿದ್ದೇನೆ. ಹಲವಾರು ವರ್ಷಗಳಿಂದ ಇರುವ ದೊಡ್ಡ ಪ್ರಮಾಣದ ಜನಸಂಖ್ಯೆ ಇಲ್ಲಿರುವುದರಿಂದ ಹಲವಾರು ಸಮಸ್ಯೆಗಳಿವೆ. ಬೆಂಗಳೂರು ಹಳ್ಳಿಗಾಡುಗಳಿಗೆ ವಿಸ್ತರಣೆಯಾಗಿದೆ. ಮುಂಬೈ ಮತ್ತು ಬೆಂಗಳೂರಿಗೆ ಹೋಲಿಸಿದಾಗ ಸರಿಸಮನಾಗಿ ಅಷ್ಟೇ ಜನಸಂಖ್ಯೆ ಹೊಂದಿದೆ. ಆದರೆ ಬೆಂಗಳೂರಿನ ಒಟ್ಟು ವಿಸ್ತೀರ್ಣದ ಅರ್ಧ ಭಾಗದಷ್ಟು ಮುಂಬೈ ನಗರವಿದೆ. ಅಲ್ಲಿ ನಗರ ಉದ್ದಕ್ಕೆ ಬೆಳೆದಿದ್ದಾರೆ, ಇಲ್ಲಿ ನಗರ ಅಡ್ಡವಾಗಿ ಬೆಳೆಯುತ್ತ ಹೋಗಿದೆ. ರಸ್ತೆ, ಯುಜಿ.ಡಿ, ಉದ್ಯಾನವನ, ಕ್ರೀಡಾಂಗಣವಾದಾಗ ನಗರ ಎನ್ನುತ್ತೇವೆ. ಬೆಂಗಳೂರನ್ನು ಯೋಜನಾಬದ್ಧವಾದ ಬೆಳವಣಿಗೆಯಾಗಬೇಕು ಎನ್ನುವ ತೀರ್ಮಾನ ಮಾಡಿದ್ದೇವೆ ಎಂದರು.
ಕಾವೇರಿ 4 ನೇ ಹಂತದ ಕಾಮಗಾರಿ ಅಂತಿಮ ಘಟ್ಟಕ್ಕೆ ಬಂದಿದೆ. 800 ಎಂ.ಎಲ್.ಡಿ ನೀರನ್ನು ಬಳಕೆ ಮಾಡುತ್ತಿದ್ದೇವೆ. ಕೊನೆ ಘಟ್ಟದಲ್ಲಿ ಈ ಭಾಗಕ್ಕೆ ಹೆಚ್ಚಿನ ನೀರು ಕೊಡಲು ಸಾಧ್ಯವಾಗಲಿದೆ. ಕಾವೇರಿ 5 ನೇ ಘಟ್ಟಕ್ಕೆ ಸುಮಾರು 770 ಎಂ.ಎಲ್.ಡಿ ನೀರು ನೀಡಲು ಹೆಚ್ಚಿವರಿಯಾಗಿ 250 ಅಡಿ ಸೇರಿಸಲು ಇಂಜಿನಿಯರ್ ಗಳ ಬಳಿ ಚರ್ಚೆ ಮಾಡಲಾಗುತ್ತಿದೆ. ಅವಲ್ಲೆವೂ ಜಾರಿಯಾದರೆ ಪೂರ್ಣಪ್ರಮಾಣದಲ್ಲಿ ಕಾವೇರಿ ನೀರನ್ನು ಹೆಚ್ಚು ದಿನಗಳ ಕಾಲ ಒದಗಿಸಲು ಮುಂಬರುವ ದಿನಗಳಲ್ಲಿ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸಮಸ್ಯೆಗಳನ್ನು ಬಗ್ರಹರಿಸಬೇಕಾದರೆ, ಜನ ಹೇಗೆ ಸಮಸ್ಯೆಯೊಂದಿಗೆ ಬದುಕುತ್ತಿದ್ದಾರೆ ಅದನ್ನು ಅರ್ಥ ಮಾಡಿಕೊಳ್ಳಬೇಕು. ಚರ್ಚೆ ಮಾಡದೆ ಹೋದರೆ ಸಮಸ್ಯೆ ಬಗೆಹರಿಯುವುದಿಲ್ಲ. ಪರಿಹಾರದ ಭಾಗವಾಗಬೇಕು. ಬೆಂಗಳೂರಿನ ಕುಡಿಯುವ ನೀರಿಗೆ ಸಮಗ್ರವಾದ ಯೋಜನೆ ರೂಪಿಸಿ , ಕುಡಿಯುವ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುತ್ತೇವೆ ಎಂದು ಹೇಳಿದರು.
ಈಗಿನ ಯೋಜನೆಗಳಿಗೆ ವೇಗ ನೀಡಿ ಮುಗಿಸಬೇಕು, ಹೊಸ ಯೋಜನೆಗಳನ್ನು ಶೀಘ್ರವಾಗಿ ಆರಂಭ ಮಾಡಬೇಕು, ಮುಂದಿನ 50 ವರ್ಷಗಳಲ್ಲಿ ಬೆಂಗಳೂರಿನ ಜನತೆಗೆ ನೀಡಬೇಕಿರುವ ಸೌಲಭ್ಯ, ಇವುಗಳನ್ನು ಸರಳವಾಗಿ ದೊರಕಿಸಲು ಸ್ಪಷ್ಟತೆಯಿಂದ ಕೆಲಸ ಮಾಡುವ ಬದ್ಧತೆ ನಮ್ಮಗಿದೆ.
ಕುಡಿಯುವ ನೀರಿನ ಸಮಸ್ಯೆ, ಯುಜಿಡಿ ವಿಸ್ತರಣೆ, ಮಳೆನೀರು ಚರಂಡಿ ಗಳನ್ನು ಪೂರ್ಣಪ್ರಮಾಣದಲ್ಲಿ ನಿರ್ಮಿಸಲು ಡಿಪಿಆರ್ ಮಾಡಿ ಆದೇಶಿಸಲಾಗಿದೆ. ಬೆಂಗಳೂರು ನಗರೋತ್ಥಾನಕ್ಕೆ 6000 ಕೋಟಿ ರೂ.ಗಳನ್ನು ಒದಗಿಸಿದೆ. ಬೆಂಗಳೂರಿನ ಸಮಗ್ರ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಕಾನೂನಿನ ಸಂಕೋಲೆಯಲ್ಲಿ ಹಲವಾರು ವರ್ಷಗಳಿಂದ ಸಿಲುಕಿರುವ ಸಮಸ್ಯೆಗಳಿಗೂ ಪರಿಹಾರ ನೀಡಲು ಕಾನೂನಾತ್ಮಕ ಚಿಂತನೆಯನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಮೆಟ್ರೋ 2 ನೇ ಹಂತ 2024 ರಲ್ಲಿ ಪೂರ್ಣ ಗೊಂಡು 3ನೇ ಹಂತ ಪ್ರಾರಂಭವಾಗಬೇಕು. ಅದಕ್ಕೆ ಡಿಪಿಆರ್ ಸಿದ್ಧಪಡಿಸಲು ಅನುಮೋದನೆಯನ್ನು ನೀಡಿದ್ದೇವೆ. ಪ್ರಮುಖವಾಗಿ ಸಂಚಾರ ದಟ್ಟಣೆ ಉಂಟಾಗುವ ಜಂಕ್ಷನ್ ಗಳನ್ನು ಸಂಪೂರ್ಣವಾಗಿ ಆಧುನೀಕರಣ ಮಾಡಿ ಸಂಚಾರವನ್ನು ಸುಗಮಗೊಳಿಸಲು ತೀರ್ಮಾನಿಸಲಾಗಿದೆ.
ಮಳೆ ಬಂದ ಸಂದರ್ಭದಲ್ಲಿ ಹೆಚ್ಚುವರಿ ನೀರು ಕೆರೆಗೆಳಿಗೆ ಸೇರಲು ಸಂಪರ್ಕ ನೀಡುವಂತೆ ಆದೇಶಿಸಲಾಗಿದೆ. ಕೆಲವು ಬಡವಣೆಗಳು ಯೋಜನಾಬದ್ಧವಾಗಿ ಉತ್ತಮವಾಗಿ ನಿರ್ಮಾಣವಾಗಿವೆ. ಅಂಥ ಬಡಾವಣೆ ಗಳಿಗೆ ಹೈಟೆಕ್ ಸ್ಪರ್ಶ ನೀಡಿ ಸುಲಭವಾಗಿ ನಾಗರಿಕ ಸೇವೆಗಳನ್ನಿ ದೊರಕುವಂತೆ ಮಾಡಬೇಕು. ಈ ಪೈಕಿ ಹೆಚ್.ಎಸ್.ಆರ್. ಬಡಾವಣೆಯೂ ಒಂದು. ಇಲ್ಲಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಸ್ಮಾರ್ಟ್ ಹೆಚ್.ಎಸ್.ಆರ್ ಮಾಡುವ ಕನಸಿದೆ. ಅದಕ್ಕೆ ಅನುಗುಣವಾಗಿ ಬೇರೆ ಬಡಾವಣೆ ಗಳನ್ನೂ ಆಯ್ಕೆ ಮಾಡಲಾಗುವುದು.ಅದನ್ನು ಬಿಬಿಎಂಪಿ , ಸರ್ಕಾರ ಮಾತ್ರ ಮಾಡುವುದಲ್ಲ, ಜನರ ಸಹಭಾಗಿತ್ವದಲ್ಲಿ ಮಾಡಲಾಗುವುದು. ಜನರನ್ನು ಭಾಗೀದಾರರನ್ನಾಗಿ ಮಾಡಿಕೊಂಡು ಉತ್ತಮ ಬಡಾವಣೆಗಳನ್ನು ನಿರ್ಮಾಣ ಮಾಡೋಣ. 110 ಗ್ರಾಮಗಳು, ಮೂಲ ಬೆಂಗಳೂರು ಹಾಗೂ ಬೆಳೆದಿರುವ ಬಡಾವಣೆಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಲಾಗುವುದು ಎಂದರು.