ಬೆಂಗಳೂರು: ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಬಾಣಂತಿ ಮೃತಪಟ್ಟಿರುವ ಪ್ರಕರಣ ಆಡಳಿತ ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿದ್ದು, ಈ ಘಟನೆ ಬಗ್ಗೆ ಪ್ರತಿಪಕ್ಷಗಳು ಕಳವಳ ವ್ಯಕ್ತಪಡಿಸಿವೆ.
ಈ ನಡುವೆ ಬಳ್ಳಾರಿ ಆಸ್ಪತ್ರೆಯ ಪರಿಸ್ಥಿತಿ ಸರಿ ಹೋಗದಿದ್ದರೆ ರಾಜೀನಾಮೆ ನೀಡಲು ಸಿದ್ಧ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಇದು ಪ್ರತಿಷ್ಠೆ ಅಥವಾ ಅಧಿಕಾರಕ್ಕೆ ಸಂಬಂಧಿಸಿದ್ದಲ್ಲ, ಇದು ಜನರ ಜೀವಕ್ಕೆ ಸಂಬಂಧಿಸಿದ್ದು,ಹಾಗಾಗಿ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಈ ಪ್ರಕರಣದ ತನಿಖೆಗೆ ತಮ್ಮ ಅಭ್ಯಂತರವಿಲ್ಲ ಎಂದ ಅವರು, ತನಿಖೆ ನಡೆಯಬೇಕು, ಯಾರೇ ಹೊಣೆಗಾರರಾದರೂ ಕ್ರಮ ಎದುರಿಸಬೇಕಾಗುತ್ತದೆ, ಇದಕ್ಕೆ ವಿರೋಧ ಪಕ್ಷದ ಬೆಂಬಲವನ್ನು ಸಹ ಕೋರುತ್ತೇನೆ ಎಂದರು.