ಬೆಂಗಳೂರು: ಬಳ್ಳಾರಿ ಜೀನ್ಸ್ ಪಾರ್ಕ್- ಕೈಗಾರಿಕಾ ನಿವೇಶನಗಳ ದರ ಅರ್ಧದಷ್ಟು ಇಳಿಕೆ ಮಾಡಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ನುಡಿದಂತೆ ನಡೆಯುತ್ತಿರುವ ನಮ್ಮ ಸರ್ಕಾರ ಬಳ್ಳಾರಿಯನ್ನು ಜವಳಿ ಉದ್ಯಮದ ಭವಿಷ್ಯದ ಹಬ್ ಆಗಿ ರೂಪಿಸುವತ್ತ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ಬಳ್ಳಾರಿ ಜೀನ್ಸ್ ಪಾರ್ಕ್‌ನಲ್ಲಿ ಕೈಗಾರಿಕಾ ನಿವೇಶನಗಳ ದರವನ್ನು ಎಕರೆಗೆ ₹1.35 ಕೋಟಿಯಿಂದ ₹67.50 ಲಕ್ಷಕ್ಕೆ ಇಳಿಸಲಾಗಿದ್ದು, ಇದರಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಣೆ ಸಾಧ್ಯವಾಗಿದೆ ಎಂದವರು ತಿಳಿಸಿದ್ದಾರೆ.
ದರ ಇಳಿಕೆಯೊಂದಿಗೆ ಸೌಲಭ್ಯಗಳ ವಿಸ್ತರಣೆ ಮಾಡಲಾಗಿದ್ದು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಅವಕಾಶದ ಹೊಸ ಬಾಗಿಲು ತೆರೆದಿದೆ. ಇದರ ಪರಿಣಾಮವಾಗಿ ನೇರ–ಪರೋಕ್ಷ ಉದ್ಯೋಗ ಸೃಷ್ಟಿ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಮತ್ತು ಪೂರಕ ವಲಯಗಳ ಬೆಳವಣಿಗೆ ಸಾಧ್ಯವಾಗಲಿದೆ ಎಂದಿದ್ದಾರೆ.
ಉತ್ತರ ಕರ್ನಾಟಕದ ಆರ್ಥಿಕ ಸಬಲೀಕರಣಕ್ಕೆ ಬಳ್ಳಾರಿ ಜೀನ್ಸ್ ಪಾರ್ಕ್ ಮಹತ್ವದ ಕೊಡುಗೆ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



















































