ಬೆಂಗಳೂರು: ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಅಕ್ಟೋಬರ್ 29 ರಿಂದ 30ರವರೆಗೆ ಗುಡುಗು ಸಿಡಿಲು ಸಹಿತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ, ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಕಳೆದ ಕೆಲವು ದಿನಗಳಿಂದ ವಿಶ್ರಾಂತಿ ನೀಡಿದ್ದ ಮಳೆರಾಯ ಅಬ್ಬರಿಸಲು ಶುರು ಮಾಡಲಿದ್ದಾನೆ. ಅ 29 ರಿಂದ ಆರಂಭವಾಗುವ ಮಳೆ ಅಕ್ಟೋಬರ್ 30ರವೆರೆಗೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಬೆಂಗಳೂರಿನಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಿದೆ. ಇಂದು ಮಧ್ಯ ರಾತ್ರಿಯೇ ಬೆಂಗಳೂರಿಗೆ ಮಳೆರಾಯ ತನ್ನ ಆರ್ಭಟ ತೋರಿಸುವ ಸಾಧ್ಯತೆಗಳಿವೆ ಎಂದಿದೆ.
ಮೈಸೂರಿನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಮಳೆಯ ಸಾಧ್ಯತೆಗಳಿವೆ. ಬಳ್ಳಾರಿಯಲ್ಲಿ ಬೇಸಿಗೆ ವಾತಾವರಣ ಇರಲಿದೆ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಮಾಹಿತಿ ನೀಡಿದೆ.
ಕರಾವಳಿ ಭಾಗದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.