ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕಿದ ಫಲಿತಾಂಶದ ಬಗ್ಗೆ ಆತ್ಮಾವಲೋಕನ ಸಭೆ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬೆಂಗಳೂರಿನಲ್ಲಿ ಗುರುವಾ ನಡೆಯಲಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ಹಂಚಿಕೊಂಡ ಕುಮಾರಸ್ವಾಮಿ, ಪಕ್ಷದಲ್ಲಿ ಮಾಡಬೇಕಿರುವ ಬದಲಾವಣೆಗಳು ಹಾಗೂ ತರಬೇಕಿರುವ ಸುಧಾರಣೆಗಳ ಬಗ್ಗೆ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಯಲಿದೆ. ಇದರಲ್ಲಿ ಯಾವ ಮುಚ್ಚುಮರೆ ಇಲ್ಲ. ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದೆವು. ಪಂಚರತ್ನ ರಥಯಾತ್ರೆಗೂ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆದರೆ, ಫಲಿತಾಂಶ ನಮಗೆ ಅತೀವ ನಿರಾಶೆ ಉಂಟು ಮಾಡಿದೆ ಎಂದರು.
ಆತ್ಮಾವಲೋಕನ ಸಭೆಯಲ್ಲಿ ಪಕ್ಷದ ಸಂಘಟನೆ ಬಗ್ಗೆ ಹೆಚ್ಚು ಒತ್ತು ಕೊಟ್ಟು ಚರ್ಚೆ ಮಾಡುತ್ತೇವೆ. ಕಾರ್ಯಕರ್ತರಲ್ಲಿ ವಿಶ್ವಾಸದ ಕೊರತೆ ಇದೆ. ಯುವಕರಿಗೆ, ಕಾರ್ಯಕರ್ತರಿಗೆ ಹೊಸ ಜವಾಬ್ದಾರಿ ಕೊಡಬೇಕು ಎಂಬ ಉದ್ದೇಶ ಇದೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಲವು ಮಹತ್ವದ ಬದಲಾವಣೆ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

























































